ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸುಳ್ಳು ಆರೋಪ ಮತ್ತು ಬಿಜೆಪಿ ಶಾಸಕರ ನಕಲಿ ಸಹಿ ಬಳಸಿ ಸುಳ್ಳು ದಾಖಲೆ ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲ ಜಿ.ದೇವೇಗೌಡ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮತ್ತು ವಕ್ತಾರೆ ಮಂಜುಳಾ ಮಾನಸ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಣ್ ಅವರು ಆ.26ರಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸೂಪರ್ ಸಿಎಂ ಬಿ.ವೈ ವಿಜಯೇಂದ್ರ ದರ್ಬಾರ್ ಎಂಬ ಐದು ಪುಟಗಳ ನಕಲಿ ದಾಖಲೆ ಬಿಡುಗಡೆ ಮಾಡಿದ್ದರು. ಇದರಲ್ಲಿ ಬಿಜೆಪಿ ಶಾಸಕರು ಸಹಿ ಮಾಡಿ ಹೈಕಮಾಂಡ್ ಗೆ ದೂರು ನೀಡಿದ್ದರು ಎಂದು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಸೂಪರ್ ಸಿಎಂ ವಿಜಯೇಂದ್ರ
ಈ ದಾಖಲೆ ಬಿಡುಗಡೆ ಮಾಡಿರುವುದರಿಂದ ವೈಯಕ್ತಿಕವಾಗಿ ವಿಜಯೇಂದ್ರ ಮತ್ತು ಬಿಜೆಪಿಯನ್ನು ನಿಂದಿಸಿದ್ದಾರೆ. ಇದರಿಂದ ವಿಜಯೇಂದ್ರ ಮತ್ತು ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿರುವ ಲಕ್ಷ್ಮಣ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ನಕಲಿ ಅಸಲಿ ಬಗ್ಗೆ ತಿಳಿದುಕೊಳ್ಳುವತ್ತ ಮುಂದಾಗಿದ್ದಾರೆ.