ಮೈಸೂರು: ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ಖಚಿತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.¸ ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರಗ್ಸ್ ಕಂಟ್ರೋಲ್ ಮಾಡಿ ವ್ಯವಸ್ಥಿತವಾಗಿ ಮಟ್ಟಹಾಕು ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಯಾವೆಲ್ಲ ವ್ಯಕ್ತಿಗಳು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೋ ಅವರಿಗೆಲ್ಲ ಶಿಕ್ಷೆ ಖಚಿತ ಎಂದು ತಿಳಿಸಿದರು.
ಸಿನಿಮಾ ಕ್ಷೇತ್ರದಲ್ಲಿ ಇರುವವರು ಜನರಿಗೆ ಮಾದರಿಯಾಗಬೇಕು. ಅದನ್ನು ಬಿಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ನೋಡಿ ಯುವ ಜನಾಂಗ ಹಾಳಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಕಠೀಣ ಕ್ರಮ ತೆಗೆದುಕೊಳ್ಳಲಿದೆ ಎಂದರು.
ದಂಧೆಯಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಾವೆಲ್ಲರೂ ಸಚಿವ ಸಂಪುಟ ಸಂಬೆಯಲ್ಲಿ ಕೂಡ ಒತ್ತಾಯಿಸಿದ್ದೇವೆ ಎಂದರು.
ಮೈತ್ರಿ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ಹಣದಿಂದ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂದು ಎಚ್‌ಡಿಕೆಯೇ ಸಿಎಂ ಆಗಿದ್ದರು, ಆ ವೇಳೆ ಎಲ್ಲಾ ಕ್ರಮ ಕೈಗೊಳ್ಳುವ ಅಧಿಕಾರವಿತ್ತು. ಅದನ್ನು ಏಕೆ ತಡೆಯಲು ಅವರು ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.
ಅವರಿಗೆ ಅಧಿಕಾರವಿದ್ದಾಗ ಗೊತ್ತಾಗಿಲ್ಲವಾ? ಈಗ ಅಧಿಕಾರ ಇಲ್ಲ ಅದಕ್ಕೆ ಮಾತನಾಡುತ್ತಿದ್ದಾರೆ. ಡ್ರಗ್ಸ್ ಹಣ ಬಳಸಿ ಸರ್ಕಾರ ಮಾಡುವ ದುರ್ಬುದ್ಧಿ ಭಾರತೀಯ ಜನತಾ ಪಕ್ಷಕ್ಕಿಲ್ಲ ಎಂದ ಅವರು ಈ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಬಿಎಸ್‌ವೈ ಗೃಹಮಂತ್ರಿ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.