ಮೈಸೂರು: ಸರಸ್ವತಿಪುರಂ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ದರೋಡೆಗೆ ಹೊಂಚು ಹಾಕುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶರತ್, ಸುಮಂತ್, ಧರ್ಮೇಶ್, ಶಶಾಂಕ್, ದಿನೇಶ್, ಸುನೀಲ್ ಕುಮಾರ್, ಕಾರ್ತಿಕ್, ಮಹದೇವ್ ಎಂದು ಗುರುತಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಲಾಗುತ್ತಿದ್ದ 1 ಮಾರುತಿ ವ್ಯಾನ್, 4 ಬೈಕ್, 11 ಮೊಬೈಲ್, 6 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ದರೋಡೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದು, ಇವರ ಗುಂಪಿನಲ್ಲಿ 30 ಜನರು ಇರುವುದು ತಿಳಿದು ಬಂದಿದೆ. ಈಗ 8 ಜನ ಸೆರೆ ಸಿಕ್ಕಿದ್ದಾರೆ. ಉಳಿದವರನ್ನು ಸದ್ಯದಲ್ಲೆ ಬಂಧಿಸಲಾಗುವುದು ಎಂದು ಮೈಸೂರಿನಲ್ಲಿ ಡಿಸಿಪಿ ಪ್ರಕಾಶ್ ಗೌಡ ಹೇಳಿಕೆ ನೀಡಿದ್ದಾರೆ.
ಬಂಧಿತರಿಂದ ಕೇಸ್ ದಾಖಲಾಗದ ಪ್ರಕರಣಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಇವರಿಂದ ಮುಂದೆ ಆಗಬೇಕಿದ್ದ ಅನಾಹುತಗಳು ತಪ್ಪಿವೆ. ಇನ್ನು ಈ ಪ್ರಕರಣ ಸಂಬಂಧ 5 ಇತರ ಠಾಣೆಯ ಪ್ರಕರಣವನ್ನೂ ಪೊಲೀಸರು ಬೇಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ದರೋಡೆಗೆ ಸಂಚು ಮಾಡುತ್ತಿದ್ದ ವೇಳೆ ಲಾಂಗ್, ಹಾಕಿ ಸ್ಟಿಕ್, 5 ಪ್ಯಾಕೆಟ್ ಖಾರದಪುಡಿ, ಎರಡು ಡ್ರ್ಯಾಗರ್, ಮಂಕಿ ಕ್ಯಾಪ್, ವಿಕೆಟ್‌ಗಳು ಸಿಕ್ಕಿದ್ದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.