ಚೆನ್ನೈ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಆರೋಪಿ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ವೆಲ್ಲೂರು ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆಕೆ ವಕೀಲರು ತಿಳಿಸಿದ್ದಾರೆ.
ಕಳೆದ 29 ವರ್ಷಗಳಿಂದ ಆಕೆ ಜೈಲಿನಲ್ಲಿದ್ದಾಳೆ. ಈ ನಡುವೆ ನಿನ್ನೆ ರಾತ್ರಿ ಮತ್ತೊಬ್ಬ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಂದಿಗೆ ಆಕೆ ಗಲಾಟೆ ಮಾಡಿಕೊಂಡಿದ್ದರು. ಅದನ್ನು ಜೈಲರ್‌ಗೆ ತಿಳಿಸಿದ್ದರಿಂದ ಆ ಬಗ್ಗೆ ಜೈಲರ್ ವಿಚಾರಿಸಲು ಹೋಗಿದ್ದರು. ಈ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೇದರಿಕೆ ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಆಕೆ ಪರ ವಕೀಲ ಪುಗಲೆಂತಿ ಅವರು ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದು, ಇದೇ ಮೊದಲ ಬಾರಿಗೆ ಅವರು ಇಂಥ ನಿರ್ಧಾರಕ್ಕೆ ಬಂದಿದ್ದಾರೆ. ಕಾರಣ ಆಕೆಯ ಸೆಲ್‌ನಲ್ಲೇ ಇರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮತ್ತೊಬ್ಬ ಕೈದಿ ನಡುವೆ ಗಲಾಟೆ ಆಗಿದ್ದು. ಅದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿಗೆ ಮಗಳ ಮದುವೆಗೆ 30 ದಿನಗಳ ಪೆರೋಲ್ ಸಿಗಬೇಕಿದೆ. ಈ ನಡುವೆ ಗಲಾಟೆ ಆಗಿದ್ದರಿಂದ ಆಕೆಯನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸುವ ಕ್ರಮವನ್ನು ಕೈಗೊಳ್ಳಲಾಗುತ್ತಿತ್ತು. ಇದರಿಂದಲೂ ಈ ರೀತಿ ನಡೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.
ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ನಳಿನಿ ಮತ್ತು ಅವರ ಪತಿ ಮುರುಗನ್ ಸೇರಿದಂತೆ ಏಳು ಮಂದಿ ಪಾತ್ರವಹಿಸಿದ್ದರು. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು, ಆದರೆ ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಯಿತು.