ನ್ಯೂಡೆಲ್ಲಿ: ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಜಾಲದ ಮೇಲೆ ಬೃಹತ್ ಕಾರ್ಯಾಚರಣೆಯನ್ನು ಶನಿವಾರ ಬೆಳ್ಳಂಬೆಳಗ್ಗೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಆಲ್ ಖೈದಾ ಉಗ್ರಗಾಮಿ ಸಂಘಟನೆಗೆ ಸೇರಿದ 9 ಮಂದಿಯನ್ನು ವಿವಿಧೆಡೆ ದಾಳಿ ನಡೆಸಿ ಬಂಧಿಸಿದೆ.
ಬಂಧಿತ ವ್ಯಕ್ತಿಗಳನ್ನು ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್, ಮೊಸರಾಫ್ ಹೊಸೆನ್ (ಎಲ್ಲರೂ ಎರ್ನಾಕುಲಂ ಮೂಲದವರು), ಮತ್ತು ಮುರ್ಷಿದಾಬಾದ್ ನಜ್ಮಸ್ ಸಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಾಲ್, ಲ್ಯು ಯೆನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಕೇರಳದ ಎರ್ನಾಕುಲಂನಲ್ಲಿ 11 ಕಡೆ ನಡೆಸಲಾದ ದಾಳಿಯಲ್ಲಿ ಉಗ್ರರನ್ನು ಬಂಧಿಸಿದ್ದು, ಬಂಧಿತರ ಬಳಿ ಇದ್ದ ಡಿಜಿಟಲ್ ಉಪಕರಣ, ದಾಖಲೆಗಳು, ಜಿಹಾದಿ ಸಾಹಿತ್ಯ, ಹರಿತವಾದ ಆಯುಧಗಳು, ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ತಯಾರಿಸುವ ಮಾರ್ಗದರ್ಶಿ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ.
ಪ್ರಾಥಮಿಕ ತನಿಖೆ ವೇಳೆ, ಈ ಉಗ್ರರನ್ನು ಪಾಕಿಸ್ಥಾನ ಮೂಲದ ಅಲ್ ಖೈದಾ ಉಗ್ರಗಾಮಿ ಸಂಘಟನೆ, ಸೋಷಿಯಲ್ ಮೀಡಿಯಾ ಮೂಲಕ ನೇಮಕಾತಿ ಮಾಡಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇವರು ರಾಷ್ಟ್ರ ರಾಜಧಾನಿ ನ್ಯೂಡೆಲ್ಲಿ ಸೇರಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುವುದಕ್ಕೆ ಪ್ರಚೋದಿತರಾಗಿದ್ದರು.
ಈ ಉಗ್ರರ ತಂಡ ಹಣ ಸಂಗ್ರಹ ಮಾಡಿಕೊಂಡು ನ್ಯೂಡೆಲ್ಲಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಪಿತೂರಿ ನಡೆಸಿದ್ದರು ಎಂದು ತಿಳಿದುಬಂದಿದೆ. ಈ ಉಗ್ರರ ಬಂಧನದಿಂದಾಗಿ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಎನ್ಐಎ ಹೇಳಿದೆ.