ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಮಲು ದಿನದಿಂದ ದಿನಕ್ಕೆ ಒಂದೊಂದು ರೂಪ ಡೆದುಕೊಳ್ಳುತ್ತಿದ್ದು, ಬಗೆದಷ್ಟು ಆಳಕ್ಕೆ ಹೋಗುತ್ತಲೆ ಇದೆ. ಈ ಸಂಬಂಧ ಮತ್ತೆ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ 12 ಆರೋಪಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಈ ಮೂಲಕ ನಟಿ ರಾಗಿಣಿ ದ್ವಿವೇದಿಗೆ ಜೈಲು ಶಿಕ್ಷೆ ಮತ್ತಷ್ಟು ಬಿಗಿಯಾದಂತೆ ಆಗಿದೆ. ಜತೆಗೆ ಎರಡು ಬಾರಿ ತಾನೆ ಡ್ರಗ್ಸ್ ತೆಗೆದುಕೊಂಡಿದ್ದಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರಿಂದ ಅವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ಸೇರಿ 12 ಆರೋಪಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದ್ದು, ಅವರಲ್ಲಿ ಶಿವಪ್ರಸಾದ್ ಎ1 ಆರೋಪಿಯಾದರೆ ನಟಿ ರಾಗಿಣಿ ಎ2 ಆರೋಪಿ. ಇನ್ನುಳಿದಂತೆ ವೀರೇಶ್ ಖನ್ನಾ ಎ3, ಪ್ರಶಾಂತ್ ರಾಂಕಾ ಎ4, ವೈಭವ್ ಜೈನ್ ಎ5, ಆದಿತ್ಯಾ ಆಳ್ವ ಎ6, ಲೂಮ್ ಪೆಪ್ಪರ್ ಎ7, ಪ್ರಶಾಂತ್ ರಿಜು ಎ8, ಅಶ್ವಿನ್ ಎ9, ಅಭಿಸ್ವಾಮಿ ಎ10, ರಾಹುಲ್ ಎ11 ಮತ್ತು ವಿನಯ್ ಎ12 ಆರೋಪಿಗಳಾಗಿದ್ದಾರೆ.