ಪಿರಿಯಾಪಟ್ಟಣ: ಪಟ್ಟಣದ ಅರಸಿನ ಕೆರೆಯಲ್ಲಿ ಅಪರಿಚತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ ನಸುಕಿನ ವೇಳೆಯಲ್ಲಿ ಸಾರ್ವಜನಿಕರು ಅರಸನಕೆರೆಯ ವಾಕಿಂಗ್ ಪಾತ್ ನಲ್ಲಿ ವಾಯು ವಿಹಾರ ಮಾಡುತ್ತಿರುವಾಗ ಕೆರೆಯದಡದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದ ಸ್ಥಿತಿಯಲ್ಲಿದ್ದ ಶವ ತೇಲುತ್ತಿರುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದರು.
ಬಳಿಕ ಪತ್ರಿಕೆಯೊಂದಿಗೆ ಮಾತನಾಡಿ ಇದು ಅಪರಿಚಿತ ವ್ಯಕ್ತಿಯ ಶವವಾಗಿದ್ದು, ಮೇಲ್ನೋಟಕ್ಕೆ ಕೊಲೆ ಎಂದು ಕಂಡುಬರುತ್ತಿದೆ. ಯಾರೋ ದುಷ್ಕರ್ಮಿಗಳು ಅಜ್ಞಾತ ಸ್ಥಳದಲ್ಲಿ ಕೊಲೆ ಮಾಡಿ ಯಾರೂ ಇಲ್ಲದ ಸಮಯದಲ್ಲಿ ಕೆರೆಗೆ ಎಸೆದು ಹೋಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಿಜಾಂಶ ತಿಳಿಯಲಿದೆ ಎಂದರು.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಡಿವೈಎಸ್ಪಿ ರವಿಪ್ರಸಾದ್, ಸಿಪಿಐಗಳಾದ ಜಗದೀಶ್ ಹಾಗೂ ಬಿ.ಆರ್.ಪ್ರದೀಪ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ, ಪೊಲೀಸ್ ಇಲಾಖಾ ಸಿಬ್ಬಂದಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಇದ್ದರು.