ಕೋಲ್ಕತ: ಶಾಲಾ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಿಂದ ಸಿಲಿಗುರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 31 ಭಾನುವಾರ ಅಕ್ಷರಶಃ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.
ರಸ್ತೆಯಲ್ಲಿ ಚಲಿಸುತ್ತಿದ್ದ ಅನೇಕ ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಅತ್ಯಾಚಾರಿ, ಹತ್ಯೆಕೋರರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಕೋಲ್ಕತದಿಂದ 500 ಕಿಲೋ ಮೀಟರ್ ಉತ್ತರಕ್ಕೆ ಚೋಪ್ರಾ ಎಂಬ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆದಿದೆ. ಸುಮಾರು 2 ಗಂಟೆಗಳು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು. ಆದರೆ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿಚಾರ್ಜ್, ಆಶ್ರುವಾಯು ಸಿಡಿಸಬೇಕಾಗಿ ಬಂತು.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಪ್ರತಿಭಟನೆ ಹಲವು ಗಂಟೆಗಳು ಮುಂದುವರಿದು ಮೂರು ಬಸ್‌ಗಳು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು.
ಪ್ರತಿಭಟನಾಕಾರರನ್ನು ಚದುರಿಸಲು ಸಂಜೆ 5 ಗಂಟೆವರೆಗೆ ಪೊಲೀಸರು ಹರಸಾಹಸ ಮಾಡಬೇಕಾಯಿತು. ಆದರೆ ಮತ್ತೊಂದು ರಸ್ತೆಯಲ್ಲಿ ಹೋದ ಪ್ರತಿಭಟನಾಕಾರರು ಅಲ್ಲಿ ತಮ್ಮ ಕೈಗೆ ಸಿಕ್ಕಿದ ಆಯುಧಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದರು.
ಅತ್ಯಾಚಾರ ಎಸಗಿಲ್ಲ ಎಂದ ಪೊಲೀಸರು
ಈ ನಡುವೆ ಪ್ರತಿಭಟನಾಕಾರರು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎನ್ನುತ್ತಿದ್ದರೆ ಪೊಲೀಸರು ಹೇಳುವುದೇ ಬೇರೆ, ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಹಲ್ಲೆ ಗುರುತುಗಳಾಗಲಿ, ಶಾರೀರಿಕವಾಗಿ ಹಿಂಸೆ ನೀಡಿ, ಲೈಂಗಿಕ ಕ್ರೌರ್ಯ ಮೆರೆದಿರುವಂಥ ಯಾವುದೇ ಗುರುತುಗಳಿಲ್ಲ, ವಿಷ ದೇಹಕ್ಕೆ ಹೋದ ಪರಿಣಾಮ ಮೃತಪಟ್ಟಿದ್ದಾಳೆ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಇಷ್ಟೊಂದು ಪ್ರತಿಭಟನೆ ನಡೆದರೂ ಕೂಡ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದ್ದು, ಬಾಲಕಿ ಸಾವಿನ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.