ವಿಜಯಪಥ ಸಮಗ್ರ ಸುದ್ದಿ
ಹೊಸಪೇಟೆ (ವಿಜಯನಗರ): ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ ಸಾರ್ವಜನಿಕರೊಬ್ಬರು ತಮ್ಮ ಸ್ಕೂಟಿಯಲ್ಲಿ ಸಾಗಿಸಿ ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹೊಸೂರಿನ ಕಿಚಡಿ ಚಂಪಾಪತಿ ಎಂಬುವರು ಮಂಗಳವಾರ ರಸ್ತೆ ಉಬ್ಬಿನಿಂದ ಬೈಕ್ ಸ್ಕಿಡ್‌ಆಗಿ ಕೆಳಕ್ಕೆ ಬಿದ್ದು ಗಾಯಗೊಂಡದ್ದರು. ಈ ವೇಳೆ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಪ್ರಯೋಜವಾಗಲಿಲ್ಲ. ಆಗ ಸ್ಕೂಟಿಯಲ್ಲಿ ಬಂದ ಕಂದಾಯ ಇಲಾಖೆಯ ನೌಕರ ಬಾಣದ ಗಣೇಶ ಚಂಪಾಪತಿ ಅವರನ್ನು ಆಸ್ಪತ್ರೆಗೆ ಸಾಗಿಲು ನೆರವಾದರು ಎಂದು ಅವರೊಂದಿಗೆ ಬಂದಿದ್ದ ಸ್ನೇಹಿತ ಅಂಚಿ ಭರಮಪ್ಪ ತಿಳಿಸಿದ್ದಾರೆ.
ನಾನು ಮತ್ತು ಕಿಚಡಿ ಚಂಪಾಪತಿ ತಾಲೂಕಿನ ಹೊಸೂರು ಮಾಗಾಣಿಯಿಂದ ನಗರದ ತಾಲೂಕು ಕಚೇರಿಯಲ್ಲಿ ಪಹಣಿ ಪಡೆಯಲು ಬೈಕಿನಲ್ಲಿ ಬರುತ್ತಿದ್ದಾಗ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಿದ್ದೆವು. ಈ ವೇಳೆ ಹಿಂಬದಿ ಕುಳಿತಿದ್ದ ಚಂಪಾಪತಿ ಅವರ ಬಲಗಾಲು ತಿರುಗುವ ಚಕ್ರದೊಳಗೆ ಸಿಲುಕಿ ಕಾಲಿನ ಎಲುಬು ಮುರಿದು ರಕ್ತಸ್ರಾವವಾಗುತ್ತಿತ್ತು. ಸಕಾಲಕ್ಕೆ ಆಂಬುಲೆನ್ಸ್ ಸಿಗಲಿಲ್ಲ, ಆಟೋಗಳೂ ಓಡಾಡುತ್ತಿರಲಿಲ್ಲ. ಆಗ ಚಂಪಾಪತಿ ಅವರನ್ನು ಗಮನಿಸಿದ ಬಾಣದ ಗಣೇಶ ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ಭರಮಪ್ಪ ತಿಳಿಸಿದ್ದಾರೆ.
ಕಾಲು ಮುರಿದಿದ್ದ ನೋವಿನಿಂದ ಚಂಪಾ ಪತಿ ಒದ್ದಾಡುತ್ತಿದ್ದರು. ಆಂಬುಲೆನ್ಸ್ ಗೆ ಕರೆಮಾಡಿದರೆ ಹೋಗುತ್ತಿರಲಿಲ್ಲ. ಗಣೇಶ ಸ್ಕೂಟಿಯಲ್ಲಿ ಕರೆದುಕೊಂಡು ಹೋಗೋಣ ಎಂದರು. ಕ್ಷಣಕಾಲವೂ ಯೋಚಿಸದೆ ಸ್ಕೂಟಿಯಲ್ಲಿ ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಿದ್ದಾರೆ.
ಕಿಚಡಿ ಚಂಪಾಪತಿ ಅವರನ್ನು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.