ಮೈಸೂರು: ಮನೆಯವರ ವಿರೋಧವನ್ನೂ ಲೆಕ್ಕಿಸದೇ ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ವಿರಸವುಂಟಾಗಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.
ಶಕ್ತಿನಗರದ ನಿವಾಸಿ ಮೊಹಮದ್ ವಾಸಿಂ (24) ಆತ್ಮಹತ್ಯೆ ಮಾಡಿಕೊಂಡವರು. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮೊಹಮದ್ ವಾಸಿಂ ಮೂರು ವರ್ಷಗಳ ಹಿಂದೆ ಶಾಂತಿನಗರದ ಶಬಾನಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮನೆಯವರ ವಿರೋಧದ ಕಾರಣ ಎನ್.ಆರ್.ವೃತ್ತದಲ್ಲಿ ಪ್ರತ್ಯೇಕವಾಗಿ ಸಂಸಾರ ನಡೆಸುತ್ತಿದ್ದರು.
ಕುಡಿತದ ಚಟಕ್ಕೆ ದಾಸನಾಗಿದ್ದ ವಾಸಿಂ ಆಗಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ದಂಪತಿ ನಡುವೆ ವಿರಸ ಮೂಡಿತ್ತು. ಅಲ್ಲದೇ, ಲಾಕ್‌ಡೌನ್ ಸಂದರ್ಭದಲ್ಲಿ ಆದಾಯವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿ ಮನನೊಂದು ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.