ಬೆಂಗಳೂರು: ಬಿಎಂಟಿಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವಿ.ಅನ್ಬು ಕುಮಾರ್ ಅವರನ್ನು ನೇಮಕ ಮಾಡಿ ನಿನ್ನೆ ಸರ್ಕಾರ ಆದೇಶ ಹೊರಡಿಸಿತ್ತು. ಇಂದು (ಸೆ.14) ಅನ್ಬುಕುಮಾರ್ ಸಂಸ್ಥೆಯ ಎಂಡಿಯಾಗಿ ಅಧಿಕಾರ ಸ್ವೀಕರಿದ್ದಾರೆ.
ಕಳೆದ ಜುಲೈ 7ರಂದು ಐಎಎಸ್ ಅಧಿಕಾರಿ ಡಾ.ಎಂ.ಟಿ. ರೆಜು ಅವರನ್ನು ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಅವರು ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ಅವರನ್ನು ಎತ್ತಂಗಡಿ ಮಾಡಿ ಆ ಜಾಗಕ್ಕೆ 2004 ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿ.ಅನ್ಬುಕುಮಾರ್ ಅವರನ್ನು ನೇಮಕ ಮಾಡಿದೆ.
ಈ ಹಿಂದೆ ಇದ್ದ ಸಿ. ಶಿಖಾ ಅವರನ್ನು ಜೂ.29ರಂದು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ ಎರಡೇ ದಿನದಲ್ಲಿ ಅಂದರೆ ಜು.2ರಂದು ಶಿಖಾ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಮರು ನೇಮಕ ಮಾಡಿತ್ತು. ಆದರೆ ಮತ್ತೆ ಒಂದು ವಾರ ಕಳೆಯುವಷ್ಟರಲ್ಲೇ ( ಜುಲೈ 7ರಂದು) ಎತ್ತಂಗಡಿ ಮಾಡಿತ್ತು.
ಆಗ ರಾಜ್ಯ ಸರ್ಕಾರ 2005ನೇ ಬ್ಯಾಚ್‌ನ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿ ಡಾ. ಎಂ.ಟಿ. ರೆಜು ಅವರನ್ನು ಕರ್ನಾಟಕ ಅರ್ಬನ್ ಇನ್ಫಾಸ್ಟ್ರಕ್ಚರ್ ಡೆವಲಪ್ ಮೆಂಟ್ ಆಂಡ್ ಫೈನಾನ್ಸ್ ಕಾರ್ಪೋರೇಶನ್ (ಕೆಯುಐಡಿಎಫ್‌ಸಿ) ನಿಂದ ವರ್ಗಾವಣೆ ಮಾಡಿ ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಿತ್ತು. ಈಗ ಅವರನ್ನು ಎರಡು ತಿಂಗಳಲ್ಲೇ ಕೆಯುಐಡಿಎಫ್‌ಸಿಗೆ ಅವರನ್ನು ವರ್ಗಾವಣೆ ಮಾಡಿದೆ.
ಅವರ ವರ್ಗಾವಣೆಯಿಂದ ತೆರವಾದ ಬಿಎಂಟಿಸಿ ಎಂಡಿ ಸ್ಥಾನಕ್ಕೆ ಕಮಿಷನರ್ ಫಾರ್ ಪಬ್ಲಿಕ್ ಇನ್‌ಸ್ಟ್ರಕ್ಷನ್ಸ್ ವಿ.ಅನ್ಬುಕುಮಾರ್ ಅವರನ್ನು ನೇಮಕ ಮಾಡಿದೆ. ನೂತನ ಎಂಡಿಯಾಗಿ ಇಂದು ಅಧಿಕಾರ ಸ್ವೀಕರಿಸಿರುವ ಅನ್ಬು ಕುಮಾರ್ ಅವರ ಜವಾಬ್ದಾರಿ ಹೆಚ್ಚಾಗಿದ್ದು, ಬರಿ ಸಮಸ್ಯೆಗಳ ಸುಳಿಯಲ್ಲೇ ಸಿಲುಕಿರುವ ಸಂಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜತೆಗೆ ನೌಕರರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಗುರುತರ ಜವಾಬ್ದಾರಿಯೂ ನೂತನ ಎಂಡಿ ಮೇಲಿದೆ.
ಇದೆಲ್ಲವನ್ನು ತಮ್ಮ ಸೇವಾನುಭವದ ಮೂಲಕ ತಾಳ್ಮೆಯಿಂದ ಆದಷ್ಟು ಶೀಘ್ರದಲ್ಲೇ ಪರಿಹರಿಸಿ ನೌಕರರ ಪಾಲಿನ ನಾಯಕನಾಗಬೇಕಿದೆ.