ಬೆಂಗಳೂರು: 75 ವರ್ಷ ವಯಸ್ಸು ದಾಟಿದ ಯಾರಿಗೂ ಬಿಜೆಪಿ ಅಧಿಕಾರ ನೀಡಿಲ್ಲ. ಆದರೂ, ನನ್ನ ಕೆಲಸ ಮೆಚ್ಚಿ ಪ್ರಧಾನಿಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರು ನನಗೆ 78 ವರ್ಷ ವಯಸ್ಸಾದರೂ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೊದಲ ಬಾರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಬಿ.ಎಸ್.ಯಡಿಯೂರಪ್ಪ ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನ್ನ ಮೇಲೆ ವಿಶೇಷ ಪ್ರೀತಿ-ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ, ಈವರೆಗೂ ಆಡಳಿತ ನಡೆಸಲು ನನಗೆ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ನನ್ನದು. ರಾಷ್ಟ್ರೀಯ ನಾಯಕರು ಜು.25ರಂದು ನೀಡುವ ಸೂಚನೆಯನ್ನು ಪಾಲಿಸುತ್ತೇನೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಈ ಸಾಧನೆಯ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ರಾಷ್ಟ್ರೀಯ ನಾಯಕರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದು ಹೇಳಿದರು.
ಪಕ್ಷದ ಎಲ್ಲ ಕಾರ್ಯಕರ್ತರು ಗೊಂದಲಕ್ಕೊಳಗಾಗದೇ ನನ್ನ ಜೊತೆ ಸಹಕಾರಿಗಳಾಗಿ ನಿಲ್ಲಬೇಕು. ನನ್ನ ಪರವಾಗಿ ಚಳವಳಿ, ಪ್ರತಿಭಟನೆ ನಡೆಸುವುದು ಸರಿಯಲ್ಲ. ಎಲ್ಲ ಸಮುದಾಯದ ಮಠಾಧೀಶರು ಬೆಂಬಲ ನೀಡಿದ್ದಕ್ಕೆ ನಾನು ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲೂ ಪಕ್ಷ ಅಧಿಕಾರದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ. ಅದಕ್ಕೆ ಎಲ್ಲ ಕಾರ್ಯಕರ್ತರ ಸಹಕಾರವೂ ಬಹು ಮುಖ್ಯ ಎಂದು ತಿಳಿಸಿದರು.