ಚಾಮರಾಜನಗರ: ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ನರಳಾಡುತ್ತಿದ್ದ ಯಳಂದೂರು ಸಮೀಪದ ಹಳ್ಳಿಯೊಂದರ ಯುವಕ ಬಸವರಾಜುನನ್ನು ಸ್ಥಳೀಯರೊಬ್ಬರು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಆದರೇ ಇತ್ತ ನಿಜವಾದ ಮಾನವೀಯತೆ, ಶ್ರದ್ಧೆ ಇರಬೇಕಾದ ವೈದ್ಯಕೀಯ ಸಿಬ್ಬಂದಿ ಕಾಲು ಮುರಿತಕ್ಕೊಳಗಾಗಿರುವ ಯುವಕನಿಗೆ ಕಳೆದೊಂದು ವಾರದಿಂದ ಚಿಕಿತ್ಸೆ ನೀಡದೆ ಅಮಾನವೀಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಈ ವಿಷಯ ತಿಳಿದ ಮಾಜಿ ಶಾಸಕ ಎಸ್.ಬಾಲರಾಜ್ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಮಾರುತಿ ಹಾಗೂ ಡಾ.ಕೃಷ್ಣಪ್ರಸಾದ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಇಬ್ಬರೂ ವೈದ್ಯರು ಆತನ ಬಳಿ ಬಿಪಿಎಲ್ ಕಾರ್ಡ್ ಇಲ್ಲದ ಕಾರಣ ನಾವು ಶಸ್ತ್ರ ಚಿಕಿತ್ಸೆ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಅದಕ್ಕೆ ಮಾಜಿ ಶಾಸಕರು, ಕಾಲು ಮುರಿದಿರುವ ಯುವಕ ಪರಿಶಿಷ್ಟ ಜಾತಿಗೆ ಸೇರಿದವನಾಗಿರುವ ಕಾರಣ ಜಾತಿ ಪ್ರಮಾಣ ಪತ್ರದ (Cast certificate) ಆಧಾರದಲ್ಲೇ ಉಚಿತವಾಗಿ ಚಿಕಿತ್ಸೆ ನೀಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ವೈದ್ಯರು ಸಮ್ಮತಿ ಸೂಚಿಸಿ ಶಸ್ತ್ರ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.
ನಂತರ ವೈದ್ಯರ ಬಳಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ಹೋದ ಯುವಕನ ಕುಟುಂಬದವರೊಬ್ಬರಿಗೆ, ಇದೆಲ್ಲಾ ಆಗುವುದಿಲ್ಲ ಹಣ ಪಾವತಿಸಿದರೆ ಮಾತ್ರ ಶಸ್ತ್ರ ಚಿಕಿತ್ಸೆ ನೀಡುತ್ತೇವೆ ಎಂದು ಬೈದು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆ ಕಡುಬಡ ಕುಟುಂಬದವರ ಕಣ್ಣೀರಿಗೆ ಬೆಲೆ ತೆತ್ತುವರ್ಯಾರು!? ಆ ಯುವಕನ ಕಾಲು ಸರಿಪಡಿಸುವರ್ಯಾರು? ಬಡಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಶೋಚನೀಯ ಸ್ಥಿತಿ ಎದುರಾದರೇ ಮುಂದಿನ ಗತಿಯೇನು!? ಸರ್ಕಾರಿ ಸೇವೆ ದೇವರ ಸೇವೆ ಎನ್ನುವ ನಮಗೆ, ಆ ದೇವರೇ ಈ ರೀತಿ ಮೋಸ ಮಾಡಿದರೇ ನೊಂದ ಆ ಯುವಕನನ್ನ ರಕ್ಷಿಸುವರು ಯಾರು?
ವೈದ್ಯೋ ನಾರಾಯಣೋ ಹರಿ ಅಂತಾರೆ. ಆದ್ರೆ ಇಲ್ಲಿ ನಡೆಯುತ್ತಿರುವುದಾದರೂ ಏನು? ಬೇಲಿಯೇ ಎದ್ದು ಹೊಲ ಮೇಯಿಯುವಂತಾಗಿದೆ. ಇದಕ್ಕೆ ಪರಿಹಾರ ಕೊಡಬೇಕಾದ ರಾಜಕೀಯ ಪುಡಾಎಇಗಳು ಎನಿಸಿಕೊಂಡವರು ಏನು ಮಾಡುತ್ತಿದ್ದಾರೆ, ಜೀವಂತ ಶವವಾಗಿ ಕುಳಿತ್ತಿದ್ದಾರೆಯೇ? ಇವರಿಗೆ ಯಾವ ಭಾಷೆಯಲ್ಲಿ ನೋವನ್ನು ತಿಳಿಸಬೇಕು. ಕುರುಡು ಕಾಂಚಾಣಕ್ಕೆ ಮಾರಿಹೋಗುವ ಇಂಥವರ ಬಳಿ ಹೋದರೆ ನ್ಯಾಯ ಸಿಗುವುದೆಲ್ಲಿ.
ಇನ್ನು ಕೆಲವು ತಿಂಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ ಸುಮಾರು 36 ಅಮಾಯಕ ಜೀವಗಳು ಹಾರಿಹೋಗಿವೆ. ಆ ವೇಳೆ ಚಾಮರಾಜನಗರ ಜಿಲ್ಲಾಡಳಿತ ರಾಷ್ಟ್ರದ ಮುಂದೆ ತಲೆ ತಗ್ಗಿಸಿ ನಿಂತಿದ್ದು ಇನ್ನೂ ಮಾಸಿಲ್ಲದಿರುವಾಗ ಎಚ್ಚೆತ್ತುಕೊಳ್ಳದ ವೈದ್ಯರು ಮತ್ತೆ ಮತ್ತೆ ಅಂತದ್ದೇ ತಪ್ಪುಗಳನ್ನು ಮಾಡಿದರೇ ಇದು ಜಿಲ್ಲಾಡಳಿತದ ವೈಫಲ್ಯವೋ!? ಅಥವಾ ವೈದ್ಯರ ಬೇಜವಾಬ್ದಾರಿ ತನವೋ?
ಬಿಪಿಎಲ್ ಕಾರ್ಡ್ ಇಲ್ಲ ಎಂಬ ನೆಪ ಹೇಳಿ ಶಸ್ತ್ರ ಚಿಕಿತ್ಸೆ ಮಾಡದ ವೈದ್ಯರೇ ಬಸವರಾಜ್’ನಂತ ಬಡಜೀವಕ್ಕೆ ಬೆಲೆ ಇಲ್ಲವೇ? ನಿಮಗೆ ಮಾನವೀಯತೆ ಮರೆಮಾಚಿ ಹೋಗಿದೆಯೇ!? ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಾಲು ಮುರಿದು ಆಸ್ಪತ್ರೆ ಸೇರಿರುವ ಆ ಬಡ ಯುವಕನಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ವೈದ್ಯರು, ಡಿಎಚ್ಓ / ಜಿಲ್ಲಾಡಳಿತದ ವಿರುದ್ಧ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಲಾಗುವುದೆಂದು ಕೆಲ ಸಂಘಟನೆಗಳು ಈ ಮೂಲಕ ಎಚ್ಚರಿಕೆ ನೀಡಿವೆ.