ಮೈಸೂರು: ಮಳಲವಾಡಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
2008ರಲ್ಲಿ ಭೂ ಹಗರಣ ಸಂಬಂಧ ಶಾಸಕ ರಾಮದಾಸ್ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಪೊಲೀಸರು ಬಿ ರಿಪೋಟ್೯ ಸಲ್ಲಿಸಿದ್ದರು. ವರದಿಯನ್ನು ಕೆಳ ನ್ಯಾಯಾಲಯ ಅಂಗೀಕರಿಸಿತ್ತು. ಕೆಳ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆಕ್ಷೇಪಣಾ ಅರ್ಜಿ ಸಲ್ಲಿಸಿದರು.
ಅಷ್ಟರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದ ರಾಮದಾಸ್ ಅವರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆಯಾಗಿತ್ತು. 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಕೋರ್ಟ್ ಆದೇಶಿಸಿತ್ತು. ಆದರೆ, ವಿಶೇಷ ಕೋರ್ಟ್ನ ಆದೇಶ ಪ್ರಶ್ನಿಸಿ ರಾಮದಾಸ್ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು.
ಇತ್ತೀಚೆಗೆ ರಾಮದಾಸ್ ಅರ್ಜಿಯನ್ನು ವಜಾ ಮಾಡಿ, ಹೈಕೋರ್ಟ್ ತಡೆಯಾಜ್ಞೆಯನ್ನು ತೆರವು ಮಾಡಿತ್ತು. ಮತ್ತೆ ವಿಚಾರಣೆ ಮುಂದುವರಿಸಿದ ವಿಶೇಷ ಕೋರ್ಟ್ರಾಮದಾಸ್ ವಿರುದ್ಧ ಐಪಿಸಿ 420, 468 ಅಡಿ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದೆ.
1994ರಲ್ಲಿ ಅಂದಿನ ಮೈಸೂರು ಡಿಸಿಯಾಗಿದ್ದ ತ.ಮ. ವಿಜಯಭಾಸ್ಕರ್ ಅವರು ಭೂಹಗರಣದ ಬಗ್ಗೆ ತನಿಖೆ ನಡೆಸಿ ರಾಮದಾಸ್ ವಿರುದ್ಧ ವರದಿ ಸಲ್ಲಿಸಿದ್ದರು.