ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಚಾಮರಾಜನಗರದ 24 ಅಮಾಯಕರ ಸಾವಿಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರನ್ನು ನೇರ ಹೊಣೆಗಾರರನ್ನಾಗಿಸಿ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.
ನಗರದ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2 ರ ಮಧ್ಯರಾತ್ರಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 24 ಮಂದಿ ಅಮಾಯಕರ ಸಾವಿಗೆ ಆಮ್ಲಜನಕದ ಕೊರತೆಯೇ ಮುಖ್ಯ ಕಾರಣವೆಂದು ರಾಜ್ಯ ಉಚ್ಚ ನ್ಯಾಯಾಲಯ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ವರದಿಯನ್ನು ಸಲ್ಲಿಸಿರುವುದು ನಿಜಕ್ಕೂ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಹಾಗೂ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಘಟನೆ ನಡೆದ ಮರು ದಿವಸ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇವಲ 3 ಮಂದಿ ಮಾತ್ರ ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆಂದು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿದರು. ನೈಜವಾಗಿ ಆಮ್ಲಜನಕದ ಕೊರತೆಯ ತಪ್ಪನ್ನು ಒಪ್ಪಿಕೊಳ್ಳದೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸುಳ್ಳು ಮಾಹಿತಿಯನ್ನು ನೀಡಿರುವುದು ನಿಜಕ್ಕೂ ಸಂವಿಧಾನ ವಿರೋಧಿ ನಡವಳಿಕೆ ಎಂದು ಆರೋಪಿಸಿದರು.
ರಾಜ್ಯ ಉಚ್ಚ ನ್ಯಾಯಾಲಯ ನೇಮಿಸಿದ್ದ ನ್ಯಾಯಮೂರ್ತಿಗಳ ವರದಿಯಿಂದ ರಾಜ್ಯ ಸರ್ಕಾರದ ಬೇಜವಾಬ್ದಾರಿತನ, ಅಸಡ್ಡೆ , ನಿರ್ಲಕ್ಷ್ಯತನ ಸಾಬೀತಾಗಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸಲು ಜಿಲ್ಲಾಡಳಿತ 24 ಅಮಾಯಕರನ್ನು ಬಲಿ ತೆಗೆದುಕೊಂಡಿರುವುದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ದೂರಿದರು.
ಮುಖ್ಯಮಂತ್ರಿಗಳು ಇದುವರೆವಿಗೂ ತಮ್ಮ ಮೌಢ್ಯಕ್ಕೆ ಜೋತು ಬಿದ್ದು ಚಾಮರಾಜನಗರಕ್ಕೆ ಭೇಟಿ ನೀಡದೆ ಅಮಾಯಕರಿಗೆ ಸಾಂತ್ವನವನ್ನೂ ಇದುವರೆವಿಗೂ ಹೇಳಲಿಲ್ಲ. ಈ ಕೂಡಲೇ ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಧನವನ್ನು ನೀಡಬೇಕು. ತಪ್ಪಿತಸ್ಥ ಉಸ್ತುವಾರಿ ಹಾಗೂ ಆರೋಗ್ಯ ಸಚಿವರ ಮೇಲೆ ಹೊಣೆಯನ್ನು ಹೊರಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಯಾವ ಮೂಲೆಯಲ್ಲಿಯೂ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸ ಬಾರದೆಂದು ನಂಜಪ್ಪ ಕಾಳೇಗೌಡ ಒತ್ತಾಯಿಸಿದರು.