ಬೆಂಗಳೂರು: ಕೆಆರ್‌ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿರುವ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಮಧ್ಯೆ ಭಾರಿ ವಾಕ್ಸಮರವೇ ನಡೆದಿದೆ.
ಸಂಸದೆ ಸುಮಲತಾ ಅಂಬರೀಷ್ ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಕೆಆರ್‌ಎಸ್ ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. ಕೆಆರ್‌ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಸಂಸದೆ ಸುಮಲತಾ ಅವರ ವಿರುದ್ಧ ಕಿಡಿಕಾರಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಕುಮಾರಸ್ವಾಮಿಯವರ ಲೆವೆಲ್ಗೆ ಇಳಿದು ನಾನು ಮಾತನಾಡುವುದಿಲ್ಲ, ಅವರ ಧಾಟಿಯಲ್ಲಿ ನಾನು ಮಾತನಾಡಲು ಹೋಗುವುದಿಲ್ಲ. ಇನ್ನು ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿರುವ ಹೇಳಿಕೆ ವಿಚಾರದಲ್ಲಿ ನನಗಿರುವ ಮಾಹಿತಿಯನ್ನು ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಡ್ಯಾಂ ಬಗ್ಗೆ ನನ್ನ ಹೇಳಿಕೆ ಕಾಳಜಿಯಿಂದ ಕೂಡಿದೆ. ಕೆಆರ್‌ಎಸ್ ಜಲಾಶಯ ನಮ್ಮ ಜೀವನಾಡಿಯಾಗಿದೆ. ಜಲಾಶಯ ಉಳಿಸುವುದೇ ನನ್ನ ಉದ್ದೇಶವಾಗಿದೆ. ಕೆಆರ್‌ಎಸ್ ರಕ್ಷಣೆ ಬಗ್ಗೆ ಸಂಸತ್ನಲ್ಲಿ ಮಾತಾಡಿದ್ದೆ. ಜಲಶಕ್ತಿ ಇಲಾಖೆ ಸಚಿವರ ಜತೆ ಚರ್ಚೆ ವೇಳೆಯೂ ಪ್ರಸ್ತಾಪಿಸಿದ್ದೆ. ಜಲಾಶಯ ಸಂರಕ್ಷಣೆ ಸಂಬಂಧ ಸಂಸತ್ನಲ್ಲಿ ಪ್ರಸ್ತಾಪಿಸಿದ್ದಾಗ ಕೆಆರ್‌ಎಸ್ ರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸುಮಲತಾ ವಿವರಿಸಿದ್ದಾರೆ
ವೈಯಕ್ತಿಕವಾಗಿ ಮಾತಾಡುವುದೇ ಕುಮಾರಸ್ವಾಮಿ ಅವರ ಹವ್ಯಾಸ: ಕೆಆರ್‌ಎಸ್ ಬಗ್ಗೆ ಮಾತನಾಡಿದಾಗಲೆಲ್ಲ ನನ್ನ ಟಾರ್ಗೆಟ್ ಮಾಡುತ್ತಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಮಾತಾಡುವುದೇ ಕುಮಾರಸ್ವಾಮಿ ಅವರ ಹವ್ಯಾಸ. ಇಂತಹ ಹೇಳಿಕೆಗೆ ನಾನು ಜಗ್ಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಸದೆಯಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಯಾರೊಬ್ಬರನ್ನೂ ಮೆಚ್ಚಿಸಲು ಕೆಲಸ ಮಾಡುವುದಿಲ್ಲ. ಮಂಡ್ಯದ ಜನರು ನನ್ನ ಕೆಲಸ ಮೆಚ್ಚಿದರೆ ಸಾಕು. ಆ ಜನರಿಗೆ ನಾನು ಉತ್ತರದಾಯಿ, ಇವರಿಗಲ್ಲ. ಯಾರೋ ಹೇಳಿದ್ದಕ್ಕೆಲ್ಲ ನಾನು ಉತ್ತರ ನೀಡಲು ಹೋಗಲ್ಲ ಎಂದರು.
ಕುಮಾರಸ್ವಾಮಿ ಹೇಳಿಕೆ ಸತ್ಯವಾಗಿದೆ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯೂ ಸತ್ಯವಾಗಿದೆ. ನನ್ನಂತಹ ಸಂಸದೆಯನ್ನು ನೋಡಿಲ್ಲ, ನೋಡೋದು ಇಲ್ಲ. ನಾನು ಯಾವಾಗಲೂ ನೇರವಾಗಿಯೇ ಮಾತನಾಡುತ್ತೇನೆ. ನನ್ನ ನೇರ ನಡೆ, ನುಡಿ ಅವರಿಗೆ ಇಷ್ಟವಾಗದಿದ್ದರೆ ಏನ್ಮಾಡಲಿ? ಕೆಆರ್‌ಎಸ್ ಜಲಾಶಯ ಉಳಿಸುವುದೇ ನನ್ನ ಉದ್ದೇಶ. ಅವರ ಮಾತೆ ವ್ಯಕ್ತಿತ್ವ, ಸಂಸ್ಕಾರ ಏನು ಎಂದು ತೋರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಮಂಡ್ಯದ ಜನ ಬುದ್ಧಿ ಕಲಿಸಿದ್ದಾರೆ. ಮಂಡ್ಯಕ್ಕೆ ಯಾರು ಸೂಕ್ತವೆಂದು ಜನರೇ ತೀರ್ಪು ನೀಡಿದ್ದರು. ಆದರೂ ಇವರು ಬುದ್ಧಿ ಕಲಿತಿಲ್ಲ ಎಂದು ಸುಮಲತಾ ಕಿಡಿಕಾರಿದರು.