ಪಿರಿಯಾಪಟ್ಟಣ: ಟೌನ್ ವ್ಯಾಪ್ತಿಯ ಅರಸಿನಕೆರೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪ್ರಕರಣ ಭೇದಿಸಿರುವ ಪೊಲೀಸರು ಕೇವಲ 12 ಗಂಟೆಗಳಲ್ಲಿ ಆತನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಮಾಡಿದ ಸೈಯದ್ ಜಲೀಲ್, ಇದಕ್ಕೆ ಸಹಕರಿಸಿದ ಫಯಾಜ್ ಅಹ್ಮದ್, ಪುಟ್ಟರಂಗ ಬಂಧಿತರು. ಕಳೆದ ಜೂ.25ರಂದು ಕೆರೆಯಲ್ಲಿ ಉದಯ್ ಎಂಬಾತನ ಶವ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ತನಿಖೆ ಕೈಗೊಂಡು ಕೊಲೆ ಆರೋಪಿಗಳನ್ನು ಕೇವಲ 12 ಗಂಟೆಯ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಟ್ಟಣದ ಫಯಾಜ್ ಅಹ್ಮದ್ ಅವರ ಗುಜರಿಯಲ್ಲಿ ಸೈಯದ್ ಜಲೀಲ್ ಮತ್ತು ಮೃತ ಉದಯ್ ಕೆಲಸ ಮಾಡುತ್ತಿದ್ದರು. ಗುಜರಿಯಲ್ಲಿ ಒಟ್ಟಿಗೆ ಮಲಗುತ್ತಿದ್ದ ಇವರ ವಿಚಾರ ತಿಳಿದ ಪಟ್ಟಣ ಪೊಲೀಸರು ಸೈಯದ್ ಜಲೀಲ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸೈಯದ್ ಜಲೀಲನ ಬೆಡ್ಶೀಟ್ ಅನ್ನು ಉದಯ್ ತೆಗೆದುಕೊಂಡಿದ್ದ. ಇದನ್ನು ಪ್ರಶ್ನಿಸಿದ ಜಲೀಲನಿಗೆ ಉದಯ್ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಜಲೀಲ್, ಉದಯನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ನಂತರ ಶವವನ್ನು ಮಹದೇಶ್ವರ ಥಿಯೇಟರ್ ಹಿಂಭಾಗ ಮರೆಮಾಚಿದ್ದ. ಬಳಿಕ ಗುಜರಿ ಮಾಲೀಕ ಫಯಾಜ್ ಅಹ್ಮದ್ ತನ್ನ ಅಂಗಡಿಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಕಟ್ಟೆಮಳಲವಾಡಿ ಗ್ರಾಮದ ಪುಟ್ಟರಂಗ ಎಂಬಾತನಿಗೆ ಹಣ ಕೊಟ್ಟು ಕರೆದುಕೊಂಡು ಬಂದು ಶವವನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿ ಕೆರೆಯ ಹಾಕಿದ್ದ ಎಂದು ತಿಳಿದುಬಂದಿದೆ.