ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಂಗಾಮಿ ಮೇಯರ್ ಅನ್ವರ್ಬೇಗ್ ಅವರಿಗೆ ಅದೃಷ್ಟದ ಮೇಲೊಂದು ಅದೃಷ್ಟ. ಆದರೆ, ಮೇಯರ್ ಆಕಾಂಕ್ಷಿಗಳಾಗಿದ್ದ ಶಾಂತಕುಮಾರಿ ಮತ್ತು ಸುನಂದಾ ಪಾಲನೇತ್ರ ಅವರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಇನ್ನೂ ಆರು ತಿಂಗಳು ಕಾಲ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಸ್ಥಳೀಯ ಸಂಘ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಮೇಯರ್ ಚುನಾವಣೆ ಬರಲಿದ್ದು, ಈ ಆದೇಶದಿಂದ ಮುಂದಿನ ಆರು ತಿಂಗಳವರೆಗೂ ಹಂಗಾಮಿ ಮೇಯರ್ ಆಗಿ ಅನ್ವರ್ ಮುಂದುವರಿಯಲಿದ್ದಾರೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದ್ದು, ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಹಂಗಾಮಿ ಮೇಯರ್ ಆಗಿ ಉಪಮೇಯರ್ ಅನ್ವರ್ಬೇಗ್ ಗೆ ಗದ್ದುಗೆ ಸಿಕ್ಕಿದೆ.