ಹಾವೇರಿ: ಸವಣೂರ ತಾಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಜೂ. 23 ರಂದು ನಡೆಸಲು ನಿಶ್ಚಯವಾಗಿದ್ದ ಬಾಲ್ಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ತಂಡ ತಡೆದಿದೆ.
ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಹಾವೇರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ತಂಡ ತೆಗ್ಗಿಹಳ್ಳಿ ಗ್ರಾಮಕ್ಕೆ ಮಂಗಳವಾರ ತೆರಳಿ ಬಾಲ್ಯವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಹಾವೇರಿ ನಗರದ ರಜಪೂತಗಲ್ಲಿ ನಿವಾಸಿ ಕೋಟೆಪ್ಪ ಭಜಂತ್ರಿ ಎಂಬುವರ 16 ವರ್ಷದ ಸೌಂದರ್ಯ ಕೋಟೆಪ್ಪ ಭಜಂತ್ರಿ ಎಂಬ ಬಾಲಕಿಯೊಂದಿಗೆ ಸವಣೂರು ತಾಲೂಕಿನ ತಗ್ಗಿಹಳ್ಳಿ ಗ್ರಾಮದ ಮಂಜುನಾಥ ಭಜಂತ್ರಿ ಎಂಬ ವರನೊಂದಿಗೆ ವಿವಾಹ ನಿಶ್ಚಯಮಾಡಿ ಜೂ.23 ರಂದು ಮದುವೆ ಮಾಡಲು ಸಿದ್ಧತೆ ನಡೆಸಲಾಗಿತ್ತು.
ಬಾಲ್ಯ ವಿವಾಹ ನಡೆಸುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳ ತಂಡ ಬಾಲಕಿಯ ಮನೆಗೆ ಭೇಟಿ ನೀಡಿ ಪಾಲಕರಿಗೆ ಹಾಗೂ ಮಗುವಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಬಗ್ಗೆ ತಿಳಿವಳಿಕೆ ಹೇಳಿ ಮುಚ್ಚಳಿಕೆ ಪ್ರಮಾಣ ಪತ್ರ ಬರೆಸಿಕೊಂಡು ಮಗುವನ್ನು ಹಾವೇರಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನ್ನವರ ತಿಳಿಸಿದ್ದಾರೆ.