ಬೆಂಗಳೂರು: ನಿಧಾನವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಬಿಜೆಪಿ ನೇತೃತ್ವದ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ಅದರಂತೆ ಈಗ ಸದ್ಯ ಬಿಎಂಟಿಸಿಯ ಘಟಕ8 ಮತ್ತು 37ರಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಂಸ್ಥೆಗೆ ಸೇರ್ಪಡೆಯಾಗಿರುವ 90 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‌ಗಳನ್ನು ತುಂಬಿ ಆ ಬಸ್‌ಗಳನ್ನು ಖಾಸಗಿ ಚಾಲನಾ ಸಿಬ್ಬಂದಿ ನಿರ್ವಹಿಸುವುದಕ್ಕೆ ಸೂಚನೆ ನೀಡಿದೆ.
ಈ ಮೂಲಕ ತಮ್ಮ ರಕ್ತ, ಬೆವರು ಹರಿಸಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತಂದಿದ್ದ ಸಂಸ್ಥೆಯ ಚಾಲನಾ ಸಿಬ್ಬಂದಿಗೆ ಗೇಟ್‌ಪಾಸ್‌ಕೊಡಲು ಸಂಸ್ಥೆ ಸೂಚನೆಯನ್ನು ಲಿಖಿತವಾಗಿ ನೀಡಿದೆ. ಅಂದರೆ, ಘಟಕ 8, 37 ಮತ್ತು 29ರಲ್ಲಿ ತಲಾ 80 ಚಾಲನಾ ಸಿಬ್ಬಂದಿಗಳನ್ನು ಬೇರೆ ಘಟಕಗಳಿಗೆ ಇದೇ ಅ.30ರೊಳಗೆ ವರ್ಗಾವಣೆ ಮಾಡುವ ಸಂಬಂಧ ಅರ್ಜಿಗಳನ್ನು ಸ್ವೀಕರಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದೆ.
ಇನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಮುಖ ಸರ್ಕಾರಿ ಸಂಸ್ಥೆಗಳನ್ನು ಈಗಾಗಲೇ ಖಾಸಗೀಕರಣ ಮಾಡಿದ್ದು, ಮಾಡುತ್ತಲೂ ಇದೆ. ಅದೇ ಮಾರ್ಗವನ್ನು ಕರ್ನಾಟಕದ ಬಿಜೆಪಿ ಸರ್ಕಾರ ಅನುಸರಿಸುತ್ತಿದ್ದು, ಮೊದಲ ಬಾರಿಗೆ ಬಿಎಂಟಿಸಿಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ಎಲ್ಲ ಸಿದ್ಧತೆಗಳು ಆಗಿದ್ದು, ಎಲೆಕ್ಟ್ರಿಕ್ ಬಸ್‌ಗಳು ಹಂತ ಹಂತವಾಗಿ ಬರುತ್ತಿದ್ದಂತೆ ಚಾಲನ ಸಿಬ್ಬಂದಿಗೆ ಗೇಟ್‌ಪಾಸ್ ಕೊಡಲಿದೆ.
ಇದು ಸದ್ಯ ಚಾಲನಾ ಸಿಬ್ಬಂದಿಗಷ್ಟೇ ಅನ್ವಯವಾಗುತ್ತದೆ ಎಂದು ಹೇಳಿದರೂ ಮುಂದಿನ ದಿನಗಳಲ್ಲಿ ಸಂಸ್ಥೆಯ ತನಿಖಾದಳ (ಎಲ್‌ಸಿ) ಸಿಬ್ಬಂದಿಗೆ ಬಳಿಕ ಘಟಕ ವ್ಯವಸ್ಥಾಪಕರಿಗೆ ನಂತರ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೂ ಸಂಸ್ಥೆಯಲ್ಲಿ ಜಾಗವಿರುವುದಿಲ್ಲ. ಸಂಸ್ಥೆಯೂ ಸಂಪೂರ್ಣ ಖಾಸಗಿಯವರಿಗೆ ವಹಿಸಿದ ಮೇಲೆ ಸಂಸ್ಥೆಯ ಅಧಿಕಾರಿಗಳಿಗೆ ಕೆಲವಿರುವುದಿಲ್ಲ. ಎಲ್ಲವನ್ನು ಖಾಸಗಿ ಸಂಸ್ಥೆಯೇ ನೋಡಿಕೊಳ್ಳುತ್ತದೆ.
ನಂತರ ಸಂಸ್ಥೆಯ ಒಟ್ಟಾರೆ ಎಲ್ಲ ಅಧಿಕಾರಿಗಳು ( ಈಗ ಖಾಸಗೀಕರಣಕ್ಕೆ ಪ್ರೇರೇಪಣೆ ನೀಡುತ್ತಿರುವವರು ಸೇರಿ) ತಲೆಮೇಲೆ ಕೈಹೊತ್ತುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಮುಂದಿನ ದಿನಗಳು ಒಳ್ಳೆಯದಾಗಿ ಕಾಣಿಸುತ್ತವೆ. ಇಲ್ಲ ಬಂದಷ್ಟೇ ಲಾಭ ಎಂದು ಕೈ ಚೆಲ್ಲಿದರೆ ಪರಿಣಾಮವೂ ಅಷ್ಟೇ ನಿಕೃಷ್ಟವಾಗಿರುತ್ತದೆ.
ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಹೊರಡಿಸಿರುವ ಆದೇಶ: ಘಟಕ 8 ಮತ್ತು ಘಟಕ 37ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಂದ ಇತರ ಘಟಕಗಳಿಗೆ ವರ್ಗಾವಣೆ ಕೋರಿ ಅರ್ಜಿಗಳನ್ನು ಸ್ವೀಕರಿಸಬೇಕು.
ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಂಸ್ಥೆಗೆ ಸೇರ್ಪಡೆಯಾಗಿರುವ 90 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ ಗಳನ್ನು ಗ್ರಾಸ್ ಕಾಸ್ಟ್ ಕಂಟ್ರಾಕ್ಟರ್ ಆಧಾರದಲ್ಲಿ ಮೆಟ್ರೋ ಫೀಡರ್ ಸೇವೆಗಳಾಗಿ ಘಟಕ 8 ಮತ್ತು ಘಟಕ 37 ಮತ್ತು ಘಟಕ 29ರಿಂದ ಪ್ರತಿ ಘಟಕದಲ್ಲಿ 30 ಬಸ್‌ಗಳ ಕಾರ್ಯಾಚರಣೆ ಮಾಡಲು ಕಾರ್ಯ ಯೋಜನೆಯನ್ನು ರೂಪಿಸಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ (BenSCL) ಯೋಜನೆಯಡಿ ಸಂಸ್ಥೆಗೆ ಸೇರ್ಪಡೆಯಾಗಲಿರುವ 90 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಗಳನ್ನು ಕ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ ) ಆಧಾರದಲ್ಲಿ ಕಾರ್ಯಾಚರಣೆ ಮಾಡಲು ಎನ್ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮ್ ಲಿಮಿಟೆಡ್ ಅವರೊಂದಿಗೆ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದೆ.
ಅದರಂತೆ ಲಿಮಿಟೆಡ್ ಖಾಸಗಿ ಚಾಲಕರ ಮೂಲಕ ಎಲೆಕ್ಟ್ರಿಕ್ ಬಸ್ ಗಳನ್ನು ಕಾರ್ಯಾಚರಿಸಲಿದೆ. ಹೀಗಾಗಿ ಬಸ್‌ಗಳ ಕಾರ್ಯಾಚರಣೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಪ್ರತಿ ಘಟಕದಿಂದ ಅಂದಾಜು 80 ಚಾಲಕರನ್ನು ಬೇರೆ ಘಟ್ಟಗಳಿಗೆ ನಿಯೋಜಿಸಲಾಗುವುದು.
ಈ ವಿಷಯವನ್ನು ಘಟಕ 8 ಮತ್ತು ಘಟಕ 37ರ ಚಾಲನಾ ಸಿಬ್ಬಂದಿಗಳ ಗಮನಕ್ಕೆ ತಂದು ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಇಚ್ಚೆಯುಳ್ಳ ಚಾಲಕರು ಮತ್ತು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ-ಕಂ-ನಿರ್ವಾಹಕ ರಿಂದ ಮನವಿಗಳನ್ನು ಪಡೆದು ಮಾಹಿತಿಯನ್ನು ಕ್ರೂಢೀಕರಿಸಿ ಘಟಕ ವ್ಯವಸ್ಥಾಪಕರ ದೃಢೀಕರಣದೊಂದಿಗೆ ಮನವಿಗಳನ್ನು ಅ.30ರೊಳಗೆ ಕಳುಹಿಸಬೇಕು. ಮಾಹಿತಿ ಕನ್ನಡ ಭಾಷೆಯಲ್ಲಿ ಎಂಎಸ್ ಎಕ್ಸೆಲ್ ನಲ್ಲಿ ಭರ್ತಿಮಾಡಿ ಇ-ಮೇಲ್ ಮುಖಾಂತರ ಕಳುಹಿಸಲು ಸೂಚಿಸಲಾಗಿದೆ.
ಮುಂದುವರಿದು ವರ್ಗಾವಣೆ ಕೋರಿ ಸ್ವೀಕರಿಸಲಾದ ಮನವಿಗಳನ್ನು ನಿಯಮಾವಳಿ ಅಗತ್ಯಕ್ಕನುಗುಣವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.