ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಳೆಯ ಕಟ್ಟಡದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲು ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಅವರಿಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಳೆಯ ಕಟ್ಟಡದ ಆವರಣದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನೂತನ ಶವಾಗಾರ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸಾರ್ವಜನಿಕರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾದಾಗ, ಅನೇಕ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದಾಗ, ಅಪರಿಚಿತ ಶವಗಳನ್ನು ಇಡಲು, ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದಾಗ ಅವರಿಗೆ ಮರಣೋತ್ತರ ಪರೀಕ್ಷೆ ನಡೆಸಲು ಶವಾಗಾರದ ಅವಶ್ಯಕತೆ ಇರುತ್ತದೆ.
ಈಗ ಇರುವ ಶವಾಗಾರವು ಶಿಥಿಲಾವಸ್ಥೆಯಿಂದ ಕೂಡಿ ಗಿಡಗಂಟೆಗಳು ಬೆಳೆದು ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಗೆ ಹಾಗೂ ಬಂದು ಹೋಗುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ನೂತನ ಶವಾಗಾರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪಿರಿಯಾಪಟ್ಟಣ ನಗರವು ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪುರಸಭಾ ಆಡಲಿತ ಮಂಡಳಿಯು ಮುಂದಾಗಬೇಕು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ 25 ಲಕ್ಷ ರೂ.ವೆಚ್ಚದಲ್ಲಿ ನೂತನ ಶವಾಗಾರದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಸಧ್ಯದಲ್ಲೇ 1 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ 25 ಲಕ್ಷ ರೂ. ವೆಚ್ಚದಲ್ಲಿ ನೂತನ ಆಂಬುಲೆನ್ಸ್ ಖರೀದಿ ಮಾಡಲಾಗಿದ್ದು ಅದನ್ನು ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು. ಪುರಸಭೆ ಆಡಳಿತ ಮಂಡಳಿ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು. ನೂತನವಾಗಿ ನಿರ್ಮಾಣವಾಗಲಿರುವ ಶವಾಗಾರದ ಕಟ್ಟಡದ ರಸ್ತೆಗೆ ಡಾಂಬರೀಕರಣ ಮತ್ತು ಸೋಡಿಯಂ ದೀಪಗಳನ್ನು ಅಳವಡಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಪುರಸಭಾ ಮುಖ್ಯಾಧಿಕಾರಿ ಪ್ರಸನ್ನಕುಮಾರ್ ಅವರಿಗೆ ಸೂಚಿಸಿದರು.
ತಾಪಂ ಇಒ ಸಿ.ಆರ್.ಕೃಷ್ಣಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಸದಾಶಿವ, ಜಿಲ್ಲಾ ಪಂಚಾಯಿತ್ ಎಇಇ ಮಂಜುನಾಥ್, ಪಾಷ, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್, ಬಿಇಒ ವೈ.ಕೆ.ತಿಮ್ಮೇಗೌಡ, ಪಶುಪಾಲಾನ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ.
ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಸದಸ್ಯರಾದ ವಿನೋದ್ ಕುಮಾರ್, ಪಿ.ಸಿ.ಕೃಷ್ಣ, ಮಹೇಶ್, ರವಿ, ಶಿವರಾಮೇಗೌಡ, ಭಾರತಿ, ರೇವತಿ, ನಳಿನಿ, ವೈದ್ಯರಾದ ಡಾ. ಪ್ರಭು, ಡಾ.ದೇವಿಕಾ, ಡಾ.ಮಹಾದೇವಸ್ವಾಮಿ, ಡಾ.ಅನಿಲ್ ಕುಮಾರ್, ಡಾ.ಪ್ರಮೋದ್, ಡಾ. ಪೃಥ್ವಿ, ಆಧೀಕ್ಷಕ ರವಿಕುಮಾರ್, ಸಿಬ್ಬಂದಿಗಳಾದ ಶೇಷಗಿರಿ, ಅಣ್ಣೇಗೌಡ, ಮುಖಂಡ ಅಣ್ಣಯ್ಯ ಶೆಟ್ಟಿ ಇದ್ದರು.