ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ. ಇದೀಗ ನಾಳೆ (ಅ.31) ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಸಂಜೆಯೇ ಅಂತ್ಯಕ್ರಿಯೆ ಮಾಡಿದರೆ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಪಡೆಯಲಾಗಲಿಲ್ಲ ಎಂಬ ನೋವು ಅವರನ್ನು ಬಾಧಿಸುತ್ತದೆ. ಹೀಗಾಗಿ ಅಭಿಮಾನಿಗಳಿಗೋಸ್ಕರ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಚಂದನವನದ ದೊಡ್ಮನೆ ಹುಡುಗ ಪುನೀತ್ ರಾಜ್ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಆದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವರಿಗೆ ಅಂತಿಮ ದರ್ಶಕ್ಕೆ ವ್ಯವಸ್ಥೆ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಎಲ್ಲರೂ ಶಾಂತಿ ಕಾಪಾಡಿಕೊಂಡು ಅಂತಿಮ ದರ್ಶನಪಡೆಬೇಕು ಎಂದು ಸಿಎಂ ಮನವಿ ಮಾಡಿದರು.
ನೆಚ್ಚಿನ ನಟನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳಿಗೆ ನಾಳೆ ಮುಂಜಾಣೆವರೆಗೂ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆ ನಡೆಸಲಾಗುತ್ತದೆ.
ಇನ್ನು ಪುನೀತ್ ಅವರ ಪುತ್ರಿ ಧೃತಿ ನ್ಯೂಯಾರ್ಕ್ನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಂಜೆ 4.30ರ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.