ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿದೇವಿಯು ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂಮಿಯು ಬಿರುಕು ಬಿಟ್ಟಿದ್ದು, ಭವಿಷ್ಯದಲ್ಲಿ ನಂದಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯು ಸಂಪೂರ್ಣ ಕುಸಿಯುವ ಆತಂಕ ನಿರ್ಮಾಣವಾಗಿದೆ.
ಮಳೆ ಸಂಪೂರ್ಣ ನಿಂತು ಭೂಮಿಯ ತೇವಾಂಶ ಹೋಗುವ ತನಕ ಕಾಮಗಾರಿ ಆರಂಭಿಸದೆ ಇರಲು ಲೋಕೋಪಯೋಗಿ ಇಲಾಖೆಯು ಚಿಂತನೆ ನಡೆಸಿದ್ದು,ಅಲ್ಲಿಯವರೆಗೆ ನಂದಿ ಮಾರ್ಗದ ರಸ್ತೆಯು ಸಾರ್ವಜನಿಕರಿಗೆ ಸಂಪೂರ್ಣ ಬಂದ್‌ಆಗಿರುತ್ತದೆ.
ಭಾರಿ ಮಳೆಯಿಂದಾಗಿ ನಂದಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅ.20ರಂದು 30 ಅಡಿಯಷ್ಟು ರಸ್ತೆ ಕುಸಿದಿತ್ತು. ನಂತರ, ಕಳೆದ ವಾರ ಜಾಸ್ತಿ ಮಳೆ ಬಂದ ಮೇಲೆ 70 ಅಡಿಯಷ್ಟು ಕುಸಿದು ಹೋಗಿದ್ದರಿಂದ ರಸ್ತೆಯೇ ಇಬ್ಬಾಗವಾಗುವ ಮಟ್ಟಿಗೆ ಬಂದು ತಲುಪಿದೆ.
ಸದ್ಯ ನಂದಿ ದೇವಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಪೊಲೀಸರು ವೇ ಪಾಯಿಂಟ್ ಮತ್ತು ಉತ್ತನಹಳ್ಳಿ ಮಾರ್ಗವಾಗಿ ನಂದಿ ದೇವಸ್ಥಾನಕ್ಕೆ ಬರುತ್ತಿದ್ದ ಮಾರ್ಗದಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಇದೀಗ ಬುಧವಾರ ರಸ್ತೆ ಕುಸಿದಿರುವ ಕಡೆಯಲ್ಲೇ 50 ಮೀಟರ್‌ನಷ್ಟು ರಸ್ತೆ ಬಿರುಕುಬಿಟ್ಟಿರುವುದನ್ನು ಕಾಣಬಹುದಾಗಿದೆ.