ಮೈಸೂರು: ನಿವೃತ್ತ ಪೊಲೀಸ್ ಸಹಾಯಕ ಆಯುಕ್ತರೊಬ್ಬರಿಗೆ ಪ್ರಾಣ ಬೆದರಿಕೆ ಒಡ್ಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಸಿಸಿಬಿಯಲ್ಲಿ ಪೊಲೀಸ್ ಸಹಾಯಕ ಆಯುಕ್ತರಾಗಿ ನಿವೃತ್ತರಾಗಿರುವ ಶಶಿಕುಮಾರ್ ಹಾಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಆ ಕ್ಲಬ್ನ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯಿಸಿ ಕ್ಲಬ್ನ ಅಧ್ಯಕ್ಷ ಹಾಗೂ ಇನ್ನಿತರರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಈ ಸಂಬಂಧ ದೇವೇಗೌಡ, ಕ್ಲಬ್ನ ಅಧ್ಯಕ್ಷ ಎಂ.ಮೋಹನ್, ಖಜಾಂಚಿ ಶಿವಣ್ಣ, ಲೋಕೇಶ್, ಮೋಹನ್ಕುಮಾರ್, ರಮೇಶ್ ಎಂಬವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಶಿಕುಮಾರ್ ದೂರು ದಾಖಲಿಸಿದ್ದಾರೆ.
ಶಶಿಕುಮಾರ್ ಸೇವೆಯಿಂದ ನಿವೃತ್ತರಾದ ನಂತರ ತಿಲಕ್ನಗರದ ಲಯನ್ಸ್ ಕ್ಲಬ್ ಆಫ್ ಮೈಸೂರು ಸಂಸ್ಥೆಗೆ ಸದಸ್ಯರಾಗಿದ್ದರು. ನಂತರ ಅವರು ಕ್ಲಬ್ನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಸೆವೆಯನ್ನು ಪರಿಗಣಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಬಂಧ ಮಾತುಕತೆ ನಡೆದಿತ್ತು.
ಅದರಂತೆ ಮಾತುಕತೆಗೆಂದು ನಾನು ಮತ್ತು ಸಿದ್ದರಾಜು ಅವರು ವಿಜಯನಗರದ ದೇವೇಗೌಡ ಅವರ ನಿವಾಸಕ್ಕೆ ತೆರಳಿದ್ದೆವು. ಈ ವೇಳೆ ಅಧ್ಯಕ್ಷ ಸ್ಥಾನವನ್ನು ನಿಮಗೆ ಏಕೆ ಬಿಟ್ಟುಕೊಡಬೇಕು ಎಂದು ದೇವೇಗೌಡ ಹಾಗೂ ಉಳಿದವರು ಮಾತಿನ ಚಕಮಕಿ ಆರಂಭಿಸಿದರು.
ನಂತರ ಎಲ್ಲರೂ ಸೇರಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದರು ಎಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಇದೇ ವೇಳೆ ಆರೋಪಿಗಳು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಆದರೆ, ಇದುವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಶಶಿಕುಮಾರ್ ಆರೋಪಿಸಿದ್ದಾರೆ.