ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮನೆಯಿಂದ ಹೊರಗೆ ಬಂದು ಕುಳಿತಿದ್ದ ಕೊರೊನಾ ಸೋಂಕಿನ ಮೇಲೆ ಕಲ್ಲು ತೂರಿರುವ ಘಟನೆ ಜಿಲ್ಲೆಯ ಕರಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಚಾಯಿತಿ ಸದಸ್ಯರು ಮನೆಯಲ್ಲಿಯೇ ಇರುವಂತೆ ಸೂಚಿಸಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಆದರೆ, ಮನೆ ಬಳಿ ಕುಳಿತಿದ್ದ ಮುತ್ತೇಗೌಡ ಹಾಗೂ ಬಲರಾಮ್ ಎಂಬ ಕಿಡಿಕೇಡಿಗಳು ಗುಂಪು ಸೇರಿಸಿ ಸೋಂಕಿತನ ಮೇಲೆ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೆ, ಗ್ರಾಮದ ಇತರರೂ ದಾಳಿ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಇತರರಿಗೂ ಸೋಂಕು ತಗಲುವ ಹಿನ್ನೆಲೆಯಲ್ಲಿ ಗ್ರಾಮಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯದಿಂದ ಸೋಂಕಿತ ಯುವಕರನ ಬಲ ಮೊಣಕೈ ಮೂಳೆ ಮುರಿದಿದೆ. ರಕ್ತ ತೀವ್ರವಾಗಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಯುವಕನ ಪೋಷಕರು ಕಿರುಚಿಕೊಂಡಿದ್ದಾರೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಆಂಬುಲೆನ್ಸ್ ಕರೆಸಿದ್ದು, ಸದ್ಯ ಎಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿ ಬಳಿಕ ಸೋಂಕಿತ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ನನಗೆ ಕೊರೊನಾ ಪಾಸಿಟಿವ್ ಮಾಹಿತಿ ತಿಳಿದ ಕೂಡಲೇ ದಾಳಿ ನಡೆಸಲು ಎದುರು ನೋಡುತ್ತಿದ್ದರು. ಮುತ್ತೇಗೌಡ ಹಾಗೂ ಬಲರಾಮ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾರೆಂದು ಆ ಯುವಕ ದೂರಿದ್ದಾನೆ.