ಸೆ.26 ರಂದು ತಂಬಾಕು ಹರಾಜು ಪ್ರಕ್ರಿಯೆ ಆರಂಭ ಹಿನ್ನೆಲೆ ರೈತರೊಂದಿಗೆ ಸಭೆ
ಪಿರಿಯಾಪಟ್ಟಣ: ಇದೇ ತಿಂಗಳ 26 ರಂದು ತಾಲೂಕಿನ ಕಗ್ಗುಂಡಿ ತಂಬಾಕು ಮಾರುಕಟ್ಟೆಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬುಧವಾರ ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತರೊಂದಿಗೆ ಸಭೆ ನಡೆಸಿ ಕುಂದುಕೊರತೆ ಆಲಿಸಲಾಯಿತು.
ಈ ಸಂದರ್ಭದಲ್ಲಿ ಹಿಟ್ನೆಹೆಬ್ಬಾಗಿಲು ಗ್ರಾಮದ ರೈತ ಜಗಪಾಲ್ ಮಾತನಾಡಿ ಕೊರೊನಾ ಮಹಮಾರಿಯ ಹೊಡೆತಕ್ಕೆ ಸಿಲುಕಿ ರೈತರು ನಲುಗಿದ್ದಾರೆ. ರೈತರು ಬೆಳೆದಿದ್ದ ಶುಂಠಿ, ಹೂವು, ತರಕಾರಿ, ಮುಸುಕಿನಜೋಳದ ಬೆಳೆಗಳಿಗೆ ಸೂಕ್ತ ಧರ ಸಿಗದ ಕಾರಣ ತ್ತರಿಸಿದ್ದಾರೆ.
ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ತಂಬಾಕಿನಿಂದಾದರೂ ಅತ್ಯಲ್ಪ ಲಾಭಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ರೈತರು ಬೆಳೆದಿರುವ ತಂಬಾಕಿಗೆ ಕನಿಷ್ಠ 200 ರೂ.ಗಳನ್ನಾದರೂ ನೀಡಲು ಮಂಡಳಿಯ ಅಧಿಕಾರಿಗಳು ಖರೀದಿದಾರ ಕಂಪನಿಗಳ ಮೇಲೆ ಒತ್ತಡ ಏರಬೇಕು ಎಂದರು.
ಸುರಗಳ್ಳಿ ಶಂಕರೇಗೌಡ ಮಾತನಾಡಿ, ಮಾರುಕಟ್ಟೆ ಆರಂಭದಿಂದ ಅಂತ್ಯದ ವರೆಗೂ ಸರಾಸರಿ ದರವನ್ನು ಕಾಯ್ದುಕೊಳ್ಳಬೇಕು, ಮಾರುಕಟ್ಟೆಯ ಒಳಗೆ ಹರಾಜು ಪ್ರಕ್ರಿಯೆ ನಡೆಯುತ್ತಿರುವಾಗ ಅದನ್ನು ವಿಕ್ಷಿಸಲು ಹೊರಭಾಗದಲ್ಲಿ ಎಲ್ಇಡಿ ಟಿವಿ ಪರದೆಯನ್ನು ಅಳವಡಿಸಬೇಕು.
ದೀರ್ಘಾವಧಿ ಕ್ಲಷ್ಟರ್ ಗಳ ಅವಧಿಯನ್ನು 10 ರಿಂದ 11 ದಿನಕ್ಕೆ ಇಳಿಸಬೇಕು ಇದರಿಂದ ಮಾರುಕಟ್ಟೆಯಲ್ಲಿ ಆಗುವ ದರದ ಬದಲಾವಣೆಯಿಂದ ಆಗುವ ನಷ್ಟವನ್ನು ಸರಿದೂಗಿಸಲು ಸಹಾಯವಾಗುತ್ತದೆ ಎಂದರು.
ಬಿಟಿಎಂ ಕೊಪ್ಪಲು ಗ್ರಾಮದ ರೈತ ವಿಶ್ವನಾಥ್ ಮಾತನಾಡಿ, ಮಾರುಕಟ್ಟೆಯಲ್ಲಿ ತಂಬಾಕು ಬೇಲುಗಳನ್ನು ಕಟ್ಟುವ ವೇಳೆಯಲ್ಲಿ ಅಲ್ಲಿನ ಕೂಲಿ ಕಾರ್ಮಿಕರು ರೈತರಿಗೆ ಹಣಕ್ಕಾಗಿ ಬೇಡಿಕೆ ಒಡ್ಡುತ್ತಾರೆ ಹಣ ನೀಡದಿದ್ದಲ್ಲಿ ಬೇಲುಗಳನ್ನು (ಸಿ.ಆರ್) ತಿರಸ್ಕರಿಸುತ್ತಾರೆ ಇದರ ಬಗ್ಗೆ ಮಂಡಳಿಯ ಅಧಿಕಾರಿಗಳು ಗಮನ ಹರಿಸಬೇಕು ಹಾಗೂ ಖರೀದಿದಾರರು ತಮಗೆ ಇಷ್ಟವಾದ ತಂಬಾಕು ಬೇಲುಗಳನ್ನು ಹೆಚ್ಚಿನ ದರಕ್ಕೆ ಕೂಗಿಕೊಂಡು ನಂತರ ದರ ಹೆಚ್ಚಾಯಿತು ಎಂಬ ಕಾರಣ ಒಡ್ಡಿ ಬೇಲುಗಳನ್ನು ಕೊಂಡುಕೊಳ್ಳದೆ ಬೇಲುಗಳನ್ನು ತಿರಸ್ಕರಿಸುತ್ತಾರೆ ಇಂಥವರಿಗೆ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಲುಕೊಪ್ಪಲು ಗ್ರಾಮದ ರೈತ ವಸಂತ ಮಾತನಾಡಿ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೇಲುಗಳಿಗೆ ಗ್ರೇಡ್ ನಿಗದಿ ಮಾಡುವಾಗ ಅನಾನುಭವಿಗಳನ್ನು ಗ್ರೇಡ್ ಬರೆಯಲು ನಿಯೋಜನೆ ಮಾಡುತ್ತಾರೆ ಇದರಿಂದ ರೈತರಿಗೆ ಪ್ರತಿ ಕೆ.ಜಿಗೆ ರೂ 20 ರಿಂದ 30 ನಷ್ಟವಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಅಥವಾ ಪಿಲ್ಡ್ ಆಫೀಸರ್ ಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ತಂಬಾಕು ಹರಾಜು ಅಧೀಕ್ಷಕ ಅಮಲ್ ಡಿ.ಸಾಮ್ ಮಾತನಾಡಿ, ಕಳೆದ 40 ವರ್ಷಗಳಲ್ಲಿ ರೈತರಿಗೆ ಉತ್ತಮ ಸರಾಸರಿ ದರ ಸಿಗುವ ನಿರೀಕ್ಷೆ ಇದ್ದು, ರೈತರು ಮಾರುಕಟ್ಟೆ ಅಂತ್ಯದ ವರೆಗೂ ಕಾಯದೆ ನಿಗದಿತ ಸಮಯದಲ್ಲಿ ತಮ್ಮ ತಂಬಾಕನ್ನು ಮಾರಾಟ ಮಾಡಿಕೊಳ್ಳಬೇಕು ಹಾಗೂ ಮಾರುಕಟ್ಟೆಯಲ್ಲಿ ರೈತರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ನೀಡಲು ತಂಬಾಕು ಮಂಡಳಿ ಸಿದ್ದವಿದ್ದು ರೈತರು ಇದರ ಉಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಂಬಾಕು ಹರಾಜು ಅಧೀಕ್ಷಕ ಪ್ರಭಾಕರನ್, ಬ್ರಿಜೂ ಭೂಷಣ್, ಫಿಲ್ಡ್ ಆಫೀಸರ್ ಗಳಾದ ವಿಜಯ ಕುಮಾರ್, ಯೋಗಿತಾ, ಋತುಪೂರ್ಣ, ರೈತರಾದ ಜಯಶಂಕರ್, ಪಿ.ಮಹದೇವ್, ಲೋಕೇಶ್, ಗಿರೀಶ್, ವೆಂಕಟೇಶ್, ಹುಣಸೆಕುಪ್ಪೆ ಚಂದ್ರೇಗೌಡ, ರಮೇಶ್, ಚೌತಿ ಶಂಕರ್, ಪ್ರಕಾಶ್ ಮತ್ತಿತರರು ಇದ್ದರು.