ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಭಯಪಡುವ ಅಗತ್ಯವಿಲ್ಲ. ನೀವು ಯಾವುದೇ ಪ್ರತಿಭಟನೆ ಮಾಡದೆ ಪ್ರತಿಯೊಬ್ಬ ನೌಕರನೂ ಕರ್ತವ್ಯಕ್ಕೆ ಹಾಜರಾಗಿ ಎಂದು ವಕೀಲ ಎಚ್.ಬಿ. ಶಿವರಾಜ್ ಸಲಹೆ ನೀಡಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ KSRTC, BMTC, NEKRTC ಮತ್ತು NWKRTC ನೌಕರರು ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸಿದ ಮುಷ್ಕರದ ವೇಳೆ ವಜಾ, ಅಮಾನತು ಮತ್ತು ವರ್ಗಾವಣೆ ಮಾಡಿರುವ ಸಂಬಂಧ ಗುರುವಾರ ಹೈ ಕೋರ್ಟ್‌ನಲ್ಲಿ ಇದ್ದ ವಿಚಾರಣೆ ಬಳಿಕ ಸಾಮಾಜಿಕ ಜಾಲತಣದಲ್ಲಿ ಲೈವ್ ಬಂದು ಮಾತನಾಡಿದರು.
ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸಮಯದ ಅಭಾವದಿಂದ ನಮ್ಮ ಕೇಸ್ ವಿಚಾರಣೆಗೆ ಸಾಧ್ಯವಾಗಿಲ್ಲ. ಹೀಗಾಗಿ ಇದೇ ಜುಲೈ 16ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ಯಾರು ಭಯಪಡದೆ ಕರ್ತವ್ಯಕ್ಕೆ ಹಾಜರಾಗಿ ಎಂದು ಸಲಹೆ ನೀಡಿದರು.
ಇನ್ನು ಮುಂದೆ ನಾವು ಕಾನೂನು ಹೋರಾಟದ ಮೂಲಕವೇ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಯಾವುದೇ ಪ್ರತಿಭಟನೆ ಮಾಡುವುದು ಬೇಡ. ಕೆಲವರು ನಿಮ್ಮ ಪರ ಇದ್ದೇವೆ ಎಂದು ನಿಮ್ಮನ್ನು ಮುಂದೆ ಬಿಟ್ಟು ಹಾಳು ಮಾಡುವುದಕ್ಕೆ ನೋಡುತ್ತಿರುತ್ತಾರೆ. ಆದ್ದರಿಂದ ನೀವು ಯಾರ ಹೇಳಿಕೆಗೂ ಕಿವಿಯಾದೆ ನಿಮ್ಮ ಕೆಲಸವನ್ನು ನೀವು ಮಾಡಿ. ನಿಮಗೆ ಕಾನೂನು ರೀತಿ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನಮ್ಮದು ಎಂದು ನೌಕರರಿಗೆ ಧೈರ್ಯ ತುಂಬಿದರು.
ಮುಂದಿನ ಸೋಮವಾರದಿಂದ ನಮ್ಮ ಕಾನೂನು ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದ್ದು, ನ್ಯಾಯಯುತವಾದ ನಿಮ್ಮ ಬೇಡಿಕೆಗಳನ್ನು ಸಾಕಾರಗೊಳಿಸಿಕೊಡುವತ್ತ ನಮ್ಮ ಹೆಜ್ಜೆ ಇರಲಿದೆ. ಹೀಗಾಗಿ ನೀವು ಯಾವುದಕ್ಕೂ ಹೆದರುವುದು ಬೇಡ, ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ನೀವು ಕೆಲಸಕ್ಕೆ ಹಾಜರಾಗಿ. ವರ್ಗಾವಣೆಗೊಂಡವರು ಈಗಾಗಲೇ ವರ್ಗಾವಣೆಗೊಂಡ ಸ್ಥಳದಲ್ಲಿ ರಿರ್ಪೋಟ್ ಮಾಡಿಕೊಂಡಿದ್ದು, ಖುಷಿಯ ವಿಚಾರ ನಿಮಗೆ ಮುಂದಿನ ದಿನಗಳಲ್ಲಿ ಶುಭ ಸುದ್ದಿ ಬರಲಿದೆ ಎಂದು ಹೇಳಿದರು.