ಬೆಂಗಳೂರು: ಯಲಹಂಕದ ಸಿಂಗನಾಯಕನಹಳ್ಳಿ ಕೆರೆಗೆ ಶುಕ್ರವಾರ ಆಮ್ ಆದ್ಮಿ ಪಕ್ಷದ ನಿಯೋಗ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿತು. 265 ಎಕರೆಗಳ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಕೆರೆಯ ಪುನರುತ್ಥಾನ ಕಾರ್ಯ ಇದುವರೆವಿಗೂ ಆಗದಿರುವುದು ನೋವಿನ ಸಂಗತಿ. ಈ ನಡುವೆ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಇನ್ನು ಇದೇ ರೀತಿ ಪ್ರಭಾವಿಗಳ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಹಲವು ಎಕರೆಗಳು ತುತ್ತಾಗಿದ್ದು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ಆಗಬೇವಕಿದೆ ಎಂದು ಆಗ್ರಹಿಸಿದರು.
ಸಿಂಗನಾಯಕನಹಳ್ಳಿ ಕೆರೆಯಲ್ಲಿ 50 ವರ್ಷಗಳ ಹಳೆಯ 7500 ಕ್ಕೂ ಹೆಚ್ಚು ಜಾಲಿ ಮರಗಳು ಬೆಳೆದಿದ್ದು ಇವುಗಳ ಸಂರಕ್ಷಣೆ ಕಾರ್ಯವು ಸಹ ಆಗಬೇಕಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಯಾವುದೇ ಜೀವಿಯ ಹತ್ಯೆಗಳು ಆಗಬಾರದು. ಕೋಟ್ಯಂತರ ರೂಪಾಯಿ ಬೆಲೆಬಾಳುವ ಈ ಜಾಲಿ, ಹೊಂಗೆ, ಬೇವಿನ ಮರಗಳನ್ನು ಟಿಂಬರ್ ಮಾಫಿಯಾಗಳಿಗೆ ಮತ್ತು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಆಗುವ ನೂರಾರು ಕೋಟಿ ರೂ. ಟೆಂಡರ್ ಗಳಿಗೆ ಬಲಿ ನೀಡಲು ಯಾವುದೇ ಕಾರಣಕ್ಕೂ ಆಮ್ ಆದ್ಮಿ ಪಕ್ಷ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಕೆರೆ ನವಿಲು, ನರಿ ಮುಂತಾದ ಪಕ್ಷಿ ಹಾಗೂ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಬೆಳೆದಿರುವ ಮರಗಳನ್ನು ಉಳಿಸಿಕೊಂಡೇ ಕೆರೆಯ ಹೂಳನ್ನು ಎತ್ತುವಂತಹ ವೈಜ್ಞಾನಿಕ ಕ್ರಮಗಳು ಈಗಾಗಲೇ ಇವೆ. ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರದ ವಿಜ್ಞಾನಿಗಳ ಸಮಿತಿಯ ಶಿಫಾರಸುಗಳನ್ನು ತೆಗೆದುಕೊಂಡು ಪರಿಸರವನ್ನು ಉಳಿಸಬೇಕಾಗಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಇದೇ ರೀತಿ ಕೆರೆಗಳಲ್ಲಿ ಇರುವ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ವೈಜ್ಞಾನಿಕವಾಗಿ ಕೆರೆಗಳು ಮತ್ತು ಮರಗಳನ್ನು ಸಹ ಪುನರುಜ್ಜೀವನಗೊಳಿಸಿರುವ ಉದಾಹರಣೆಗಳು ಸಾಕಷ್ಟಿವೆ . ಅದನ್ನು ಬಿಟ್ಟು ಸ್ಥಳೀಯ ಯಲಹಂಕ ಕ್ಷೇತ್ರದ ಶಾಸಕ ಎಸ್ .ಆರ್. ವಿಶ್ವನಾಥ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಟಿಂಬರ್ ಮಾಫಿಯಾಗಳ ಪರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉಚಿತವಲ್ಲ ಎಂದು ಎಚ್ಚರಿಸಿದರು.
ಪರಿಸರ ಸಂರಕ್ಷಣೆಗಾಗಿ ಮುಂದಿನ ಪೀಳಿಗೆಗಳಿಗೆ ಕೆರೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ದಾಸರಿ ತಿಳಿಸಿದರು.
ಯಲಹಂಕ ವಿಧಾನಸಭೆಯ ಪಕ್ಷದ ಮುಖಂಡರಾದ ಫಣಿರಾಜ್ ಮಾತನಾಡಿ, ಕೆ ಸಿ ವ್ಯಾಲಿ ನೀರನ್ನು ಸಿಂಗನಾಯಕನಹಳ್ಳಿ ಕೆರೆಗೆ ಹರಿಸುವ ಶಾಸಕರ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಾಗಲೇ ಕೋಲಾರ -ಚಿಕ್ಕಬಳ್ಳಾಪುರ ಭಾಗದ ರೈತರು ಕೆಸಿ ವ್ಯಾಲಿ ನೀರಿನ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಆತಂಕಗೊಳಗಾಗಿದ್ದಾರೆ. ಈ ಕೂಡಲೇ ಒತ್ತುವರಿಯಾಗಿರುವ ಕೆರೆ ಹರಿವು ಜಾಗಗಳನ್ನು ತೆರವುಗೊಳಿಸಿದರೆ ಸರಾಗವಾಗಿ ಕೆರೆಗೆ ನೀರು ತುಂಬುತ್ತದೆ ಎಂದು ತಿಳಿಸಿದರು.
ಸರ್ಕಾರವು ಈ ಕೂಡಲೇ ವಿಜ್ಞಾನಿಗಳ ಸಮಿತಿಯನ್ನು ರಚಿಸಿ ಸೂಕ್ತ ಹಾಗೂ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಕೆರೆಗೆ ಭೇಟಿ ನೀಡಿದ ಪಕ್ಷದ ನಿಯೋಗದಲ್ಲಿ ಮುಖಂಡರಾದ ಜಗದೀಶ್ ವಿ. ಸದಂ, ರಾಜಶೇಖರ್ ದೊಡ್ಡಣ್ಣ, ಜಯಕುಮಾರ್, ನಿತಿನ್ ರೆಡ್ಡಿ ಸಂತೋಷ್’, ಪ್ರಕಾಶ್, ಉಷಾ ಮೋಹನ್, ಸುಹಾಸಿನಿ , ಪುರುಷೋತ್ತಮ್ ಇದ್ದರು.