ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡುವಂತೆ ಎಲ್ಲಾ ಕಾಲೇಜುಗಳಿಗೆ ಪಿಯು ಬೋರ್ಡ್ ಸುತ್ತೋಲೆ ನೀಡಿದೆ.
ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 2 ವಿಷಯಗಳಿಗೆ ಪರೀಕ್ಷೆ ನಡೆಸಲು ಬೋರ್ಡ್ ಸೂಚನೆ ನೀಡಿದೆ. ಈ ಮೊದಲು ಪ್ರಥಮ ಪಿಯುಸಿ ಪಾಸ್ ಎಂದು ಶಿಕ್ಷಣ ಸಚಿವರು ತಿಳಿಸಿದ್ದರೂ ಸಹ, ಆನ್ ಲೈನ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು , ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.
ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎರಡು ವಿಷಯಗಳಿಗೆ ಪರೀಕ್ಷೆ ನೀಡಲು ಸೂಚನೆ ನೀಡಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಿಲ್ಲ. ಆದರೆ ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಪಿಯು ಬೋರ್ಡ್, ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿದ್ದು, ಪಿಯು ಬೋರ್ಡ್ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿರಲಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಉತ್ತರ ಬರೆದು ವಾಟ್ಸ್‌ಆಪ್, ಇಮೇಲ್ ಅಂಚೆ ಮೂಲಕ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ಕಳುಹಿಸಬೇಕು.
ವಿದ್ಯಾರ್ಥಿಗಳು ಕಳುಹಿಸಿದ ಉತ್ತರ ಪತ್ರಿಕೆಗಳನ್ನು ಉಪನ್ಯಾಸಕರು ಮೌಲ್ಯಮಾಪನ ಮಾಡಿ Students Achievement Tracking System ನಲ್ಲಿ ಫಲಿತಾಂಶವನ್ನು ಅಪ್‌ಲೋಡ್ ಮಾಡಬೇಕು. ಅಸೆಸ್ಮೆಂಟ್ ವಿಧದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಮೊದಲ ಅಸೆಸ್ಮೆಂಟ್‌ಗೆ ಜೂನ್ 20 ಕೊನೆಯ ದಿನವಾಗಿದೆ. ಉಪನ್ಯಾಸಕರು ಜೂನ್ 25ರೊಳಗೆ ಮೌಲ್ಯಮಾಪನ ಮಾಡುವಂತೆ ಸೂಚಿಸಲಾಗಿದೆ. ಎರಡನೇ ಅಸೆಸ್ಮೆಂಟ್‌ಗೆ ಜೂನ್ 26 ಕೊನೇ ದಿನವಾಗಿದ್ದು, ಜುಲೈ 5ರ ಒಳಗೆ ಮೌಲ್ಯಮಾಪನ ನಡೆಸಬೇಕಿದೆ.