ಬೆಂಗಳೂರು: ಕಳೆದ ಒಂದೂವರೆ ವರ್ಷದ ಬಳಿಕ ಮತ್ತೆ ಶಾಲೆಗಳು ಇಂದಿನಿಂದ ಆರಂಭವಾಗಿದ್ದು, ಮಕ್ಕಳು ಖುಷಿಯಿಂದಲೇ ಶಾಲೆಗೆ ಬರುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ನಗರದ ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.
ಈ ವೇಳೆ ಮಕ್ಕಳೊಂದಿಗೆ ಮಾತನಾಡಿ ಅವರ ಖುಷಿಯನ್ನು ಆನಂದಿಸಿದರು. ಅಲ್ಲದೆ ಮಕ್ಕಳು ಶಾಲೆ ತೆರೆದಿರುವುದಕ್ಕೆ ಅಭಿನಂದನೆ ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದಿನಿಂದ ಶಾಲೆಗಳು ಶುರುವಾಗಿರುವುದಕ್ಕೆ ಮಕ್ಕಳು ಮತ್ತು ಶಿಕ್ಷಕರು ಬಹಳ ಸಂತೋಷ ಪಡುತ್ತಿದ್ದಾರೆ. ಅವರಂತೆ ನನಗೂ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.
ನಮ್ಮ ಮಕ್ಕಳು ಇಲ್ಲಿಯವರೆಗೆ ಅನುಭವಿಸಿದ ಸಮಸ್ಯೆ ಇನ್ನು ಮುಂದೆ ಬರದಂತೆ ನೋಡಿಕೊಳ್ಳುತ್ತೇವೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲೂ ನಾವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ತಜ್ಞರೊಂದಿಗೂ ಚರ್ಚಿಸಿದ್ದು ಅವರ ಸಲಹೆ ಮೇರೆಗೆ ಶಾಲೆ – ಕಾಲೇಜುಗಳನ್ನು ಆರಂಭಿಸಲಾಗಿದೆ. ಹೀಗಾಗಿ ಯಾರು ಆತಂಕಕ್ಕೆ ಒಳಗಾಗದೆ ಶಾಲೆಗೆ ಬಂದು ಕಲಿಕೆ ಮುಂದುವರಿಸಿ ಎಂದು ಕಿವಿ ಮಾತು ಹೇಳಿದರು.
ಇನ್ನು ಶಿಕ್ಷಕರೂ ಕೂಡ ಶಾಲೆಗಳನ್ನು ತೆರೆದಿರುವುದಕ್ಕೆ ಆನಂದ ಭಾಷ್ಪ, ಉಕ್ಕಿದ ಭಾವೋದ್ವೇಗ ಕಾಣುತ್ತಿತ್ತು. ಇನ್ನು ರಾಜ್ಯದ ಎಲ್ಲ ಶಾಲೆಗಳು ತೆರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಆಯಾಯ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಎಲ್ಲವನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂತಸ ಪಡುತ್ತಿದ್ದಾರೆ.
ಸಿಎಂ ಜತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.