ಬೆಂಗಳೂರು: ಪ್ರಾಥಮಿಕ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದೇ ಅಕ್ಟೋಬರ್ 25 ರಿಂದ ತರಗತಿಗಳು ಪುನರಾರಂಭಗೊಳ್ಳಲಿದ್ದು, ಈಗಾಗಲೇ ಮಾಧ್ಯಮಿಕ, ಪ್ರೌಢಶಾಲೆ, ಕಾಲೇಜುಗಳು ಆರಂಭಗೊಂಡಿರುವುದರಿಂದ ಕೋವಿಡ್-19 ವೈರಾಣು ನಿಯಂತ್ರಣ ಕುರಿತಂತೆ ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಪಾಲಿಸುವಂತೆ ಆಯಾಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ಹೊರಡಿಸಲಾಗಿರುವ ಪ್ರಮಾಣಿತ ಕಾರ್ಯ ವಿಧಾನಗಳನ್ನು (ಎಸ್.ಓ.ಪಿ) ಕಡ್ಡಾಯವಾಗಿ ಪಾಲಿಸಬೇಕು. ಅಕ್ಟೋಬರ್ 25 ರಿಂದ 1ನೇ ತರಗತಿಯಿಂದ 5ನೇ ತರಗತಿ ಶಾಲೆಗಳನ್ನು ಪುನರಾರಂಭಿಸಲು ಅನುಮತಿಸಿದೆ.
ಭೌತಿಕ ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಪ್ರವೇಶ ದ್ವಾರಗಳಲ್ಲಿ ಕೋವಿಡ್-19 ರೋಗ ಲಕ್ಷಣಗಳ ತಪಾಸಣೆ, ತರಗತಿ ಕೋಣೆಗಳ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಭರ್ತಿ ಮಾಡಬೇಕು.
ಹ್ಯಾಂಡ್ ಸ್ಯಾನಿಟೈಸರ್ಗಗಳನ್ನು ಒದಗಿಸಬೇಕು. ಪ್ರಾಯೋಗಿಕವಾಗಿ ಸಾಧ್ಯವಾಗುವಂತೆ ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರಮುಖವಾಗಿ ಶಾಲಾ ಪ್ರವೇಶ ಮತ್ತು ನಿರ್ಗಮನದ ಸ್ಥಳಗಳಲ್ಲಿ ಜನದಟ್ಟಣೆ ಉಂಟಾಗದಂತೆ ಕ್ರಮವಹಿಸಬೇಕು.
ತರಗತಿ ಕೋಣೆಗಳು ಮತ್ತು ವಿಶ್ರಾಂತಿ ಕೋಣೆಗಳನ್ನು ಪ್ರತಿನಿತ್ಯ ಶೇ.1 ರಷ್ಟು ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣದಿಂದ ಸೋಂಕುರಹಿತಗೊಳಿಸಬೇಕು. ಎರಡು ಡೋಸ್ ಕೋವಿಡ್ ಲಸಿಕೆ ಪಡೆದಂತಹ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ 1 ರಿಂದ 5ನೇ ತರಗತಿ ಕೊಠಡಿಗಳಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. 50 ವರ್ಷಗಿಂತ ಮೇಲ್ಪಟ್ಟ ವಯಸ್ಸಿನ ಶಿಕ್ಷಕರು ಕಡ್ಡಾಯವಾಗಿ ಮುಖ ರಕ್ಷಕ(ಫೇಸ್ ಶಿಲ್ಡ್)ಗಳನ್ನು ಬಳಸಬೇಕು.
ಈಜುಕೊಳ ಕಾರ್ಯಾಚರಣೆಗೆ ಅನುಮತಿ: ಪ್ರತಿ ತಂಡದ ಶೇ.50 ರಷ್ಟು ಸಾಮರ್ಥ್ಯಕ್ಕೆ ಅನುಮತಿ ನೀಡಬೇಕು. ಪ್ರವೇಶ ದ್ವಾರಗಳಲ್ಲಿ ಅನುಮತಿಸಬಹುದಾದ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಜ್ವರ ಮತ್ತು ಉಸಿರಾಟದ ಲಕ್ಷಣಗಳನ್ನು ಪರೀಕ್ಷಿಸಬೇಕು.
ಯಾವುದೇ ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಅವಕಾಶ ನೀಡಬೇಕು. ಎರಡು ಡೋಸ್ ಕೋವಿಡ್-19 ಲಸಿಕೆ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ಅವಕಾಶ ನೀಡಬೇಕು.
ಪ್ರತಿ ತಂಡದ ನಂತರ ಈಜುಗಾರರು ಬಳಸುವ ವಿಶ್ರಾಂತಿ ಕೊಠಡಿಗಳು, ಕಾಲುದಾರಿಗಳು ಮತ್ತು ಇತರೆ ಸಾಮಾನ್ಯ ಸ್ಥಳಗಳನ್ನು ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣದಿಂದ ಸೋಂಕುರಹಿತಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.