ವಿಜಯಪಥ ಸಮಗ್ರ ಸುದ್ದಿ
ರಾಯಚೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಪ್ರತಿಷ್ಠೆ ಆಗಬಾರದು. ಸಮಸ್ಯೆಯನ್ನು ಕೇಂದ್ರ ಸರ್ಕಾರವು ಕುಳಿತು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ದೇವದುರ್ಗದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರಿಗೆ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಚಳಿಯನ್ನು ಲೆಕ್ಕಿಸದೆ ಅವರು ಹೋರಾಟ ನಡೆಸುತ್ತಿದ್ದಾರೆ ಅವರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ರೈತರ ಹೋರಾಟದ ಹಿನ್ನೆಲೆ ಕಾಂಕ್ರೀಟ್ ಗೋಡೆ ಕಟ್ಟುವ ಅವಶ್ಯಕತೆ ಇರಲಿಲ್ಲ ರೈತರ ಮೇಲೆ ಅಷ್ಟೊಂದು ಕಠಿಣ ಕ್ರಮ ಯಾಕೆ? ರೈತರ ಹೋರಾಟ ಪ್ರತಿಷ್ಠೆ ಆಗಬಾರದು ರೈತರಿಗೆ ಅನಗತ್ಯವಾಗಿ ಹಿಂಸೆ ಕೊಡಬಾರದು ಎಂದು ಸಂಸತ್ನಲ್ಲಿ ಹೇಳಿದ್ದೇನೆ ಎಂದರು.
ಇನ್ನು ಗಣರಾಜ್ಯೋತ್ಸವದಂದು ನಡೆದ ಗಲಾಟೆಗೆ ವಿದೇಶಿ ಹಣ ಬಂದಿದೆ ಎಂಬ ಬಗ್ಗೆ ನಾನು ಏನನ್ನೂ ಈಗ ಹೇಳುವುದಿಲ್ಲ. ಈ ಬಗ್ಗೆ ಗೃಹ ಸಚಿವಾಲಯ ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣವಾದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೀಸಲಾತಿ ಹೋರಾಟ ಕುರಿತು ನಡೆಯುತ್ತಿರುವ ಸಮಾವೇಶ ಹೋರಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ನನಗಿಂತ ಸಿದ್ದರಾಮಯ್ಯನವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆ ಅವರನ್ನೇ ಮಾತನಾಡಿಸುವುದು ಸೂಕ್ತ ಎಂದರು.