ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ಐದು ದಿನ ಕಳೆದಿದೆ. ಆದರೆ ಹಳ್ಳಿಗಳಲ್ಲಿ ಜಗಳ ಮಾತ್ರ ನಿಂತಿಲ್ಲ. ಈ ಜಗಳದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೌದು! ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸೋಲು ಗೆಲುವಿನ ಸಂಬಂಧ ನಡೆದ ಮಾರಾಮಾರಿಯಲ್ಲಿ ಜಗಳ ಬಿಡಿಸಿ ಸಮಾಧಾನ ಹೇಳಲು ಹೋದ ನಿವೃತ್ತ ಶಿಕ್ಷಕರನ್ನೇ ಥಳಿಸಿ ಎಳೆದಾಡಿದ ಪರಿಣಾಮ ಆವರು ಮೃತಪಟ್ಟಿದ್ದಾರೆ. ಹಾಗೆಯೇ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮೀನಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೀನಿಗರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಕೃಷ್ಣಪ್ಪ (70) ಮೃತಪಟ್ಟಿದ್ದು, ಮೃತರ ಮಗ ವಿರೇಂದ್ರ ತೀವ್ರ ಗಾಯಗೊಂಡು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ :
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಿಪ್ಪಮ್ಮ ರಂಗಪ್ಪ ಎಂಬುವರು ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಕಲಾ ಶೃಂಗೇಶ್ ಎಂಬುವರು ಸೋಲು ಅನುಭವಿಸಿದ್ದರು. ಈ ಸಂಬಂಧ ನಿನ್ನೆ ಸಂಜೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಕೃಷ್ಣಪ್ಪ ಜಗಳ ಬಿಡಿಸಲು ಹೋಗಿದ್ದರು. ಈ ಸಮಯದಲ್ಲಿ ಕೃಷ್ಣಪ್ಪ ಅವರನ್ನೇ ಥಳಿಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಗಲಾಟೆಗೆ ಕಾರಣರಾದವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.