ಬೆಂಗಳೂರು: ಮಳೆ ಬಂದವೇಳೆ ಚಿನ್ನದ ನಾಣ್ಯ ಬಿದ್ದಿದೆ ಎಂದು ಅನೇಕಲ್ ಸಮೀಪದ ಬಾಗಲೂರಿನಲ್ಲಿ ಜನರು ನೆಲದಲ್ಲಿ ಸಿಕ್ಕ ನಾಣ್ಯಗಳನ್ನು ಎತ್ತಿಕೊಂಡು ಮನೆ ಸೇರಿದ್ದಾರೆ. ಇನ್ನು ಕೆಲವರು ನಾಣ್ಯವನ್ನು ಹುಡುಕಾಡಿ ಬರಿಗೈಯಲ್ಲಿ ಮನೆಗೆ ವಾಪಸ್ ಆಗಿದ್ದಾರೆ.
ಹೌದು! ಇದು ವದಂತಿಯೂ ಅಥವಾ ನಿಜವಾಗಲು ಮಳೆಯಲ್ಲಿ ಚಿನ್ನದ ನಾಣ್ಯಗಳು ಉದುರಿದವೋ ಗೊತ್ತಿಲ್ಲ. ಆದರೆ ಚಿನ್ನ ಸಿಕ್ಕಿದ ಮಾತನ್ನು ಕೇಳಿಸಿಕೊಂಡ ಜನರು ಒಂದೇಡೆ ಜಮಾಯಿಸಿ ಚಿನ್ನದ ನಾಣ್ಯ ಹುಡುಕಾಡಿದ ಘಟನೆ ಕರ್ನಾಟಕದ ಗಡಿಯ ತಮಿಳುನಾಡಿನ ಬಾಗಲೂರಿನಲ್ಲಿಅ.9ರಂದು ನಡೆದಿರುವುದು ಸುಳ್ಳಲ್ಲ.
ಶುಕ್ರವಾರ ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ತಮಿಳುನಾಡಿನ ಬಾಗಲೂರು ಪೊಲೀಸ್ ಕ್ವಾಟ್ರಸ್ ಎದುರು ಮಳೆ ಬಂದಾಗ ನಾಣ್ಯ ಬಿದ್ದಿದೆ ಎಂದು ಕೆಲವರು ಅದನ್ನು ಎತ್ತಿಕೊಂಡು ಹೋಗಿದ್ದಾರೆ. ಈ ವಿಷಯ ಎಲ್ಲೆಡೆ ಗಾಳಿಗಿಂತಲೂ ವೇಗವಾಗಿ ಹಬ್ಬಿತ್ತು. ಹೀಗಾಗಿ ಹತ್ತಾರು ಕಿಲೋಮೀಟರ್‌ನಿಂದ ಅಕ್ಕಪಕ್ಕ ಗ್ರಾಮದ ಜನರೆಲ್ಲ ಜಮಾಯಿಸಿ ಚಿನ್ನದ ನಾಣ್ಯದ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದು, ಇನ್ನು ಕೆಲವರು ಸಿಗದಿದ್ದಕ್ಕೆ ಬೇಸರದಿಂದ ಮನೆಗೆ ಹೋಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಬಾಗಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ನಾಣ್ಯಗಳನ್ನು ಜನರಿಂದ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಮಧ್ಯೆ ಅ.10ರಂದು ಬೆಳಗ್ಗೆಯೂ ಕೂಡ ಚಿನ್ನದ ನಾಣ್ಯ ಸಿಗಬಹುದು ಎಂಬ ನಂಬಿಕೆಯಿಂದ ಜನರು ಆ ಸ್ಥಳದಲ್ಲಿ ಹುಡುಕಾಟ ಮಾಡೆಸಿದ್ದಾರೆ.
ಪೊಲೀಸರು ಈಗಾಗಲೇ ಸಿಕ್ಕಿರುವ ನಾಣ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ ಪರಿಶೀಲನೆ ನಡೆಸಿದ್ದು ಅವು ಚಿನ್ನದ ನಾಣ್ಯ ಎನ್ನುವುದು ಖಚಿತವಾಗಿದೆ. ಹೀಗಾಗಿ ಸಿಕ್ಕಿದ ನಾಣ್ಯವನ್ನು ತೆಗೆದುಕೊಂಡು ಮನೆಗೆ ಹೋದವರಲ್ಲಿಯೂ ಕೂಡ ಆತಂಕ ಶುರುವಾಗಿದೆ.
ಸ್ಥಳೀಯರು ಹೇಳುವ ಪ್ರಕಾರ ರಾಜಮಹಾರಾಜರ ಕಾಲದಲ್ಲಿ ನಾಣ್ಯಗಳನ್ನು ಭೂಮಿಯಲ್ಲಿ ಇಟ್ಟಿರಬಹುದು, ಮಳೆ ಬಂದಾಗ ಮಣ್ಣಿನಲ್ಲಿ ಕೊಚ್ಚಿಕೊಂಡು ಹೀಗೆ ಬಂದಿರಬಹುದು ಎನ್ನಲಾಗುತ್ತಿದೆ. ಈ ನಡುವೆ ನಾಣ್ಯಗಳು ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ತನಿಖೆಯ ನಂತರವಷ್ಟೇ ಎಲ್ಲಿಂದ ಬಂದ ನಾಣ್ಯಗಳು ಇವು ಎನ್ನುವ ಬಗ್ಗೆ ಮಾಹಿತಿ ತಿಳಿಯಲಿದೆ. ಸದ್ಯ ಸಿಕ್ಕಿರುವ ಕೆಲ ನಾಣ್ಯಗಳಲ್ಲಿ ಉರ್ದು ಭಾಷೆಯ ಲಿಪಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಬಾಗಲೂರಿನಲ್ಲಿ ಸಿಕ್ಕ ನಾಣ್ಯಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆ ಶುರುವಾಗಿದ್ದು, ಮಳೆ, ಸಿಡಿಲಿನಿಂದ ಬಂದ ನಾಣ್ಯಗಳೋ ಅಥವಾ ಭೂಮಿಯಿಂದ ಹೊರ ಬಂದ ನಾಣ್ಯಗಳು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.