ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸದ ದೃಷ್ಟಿಯಿಂದ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದೆಯೇ ಹೊರತು ಸರ್ಕಾರದ ಪ್ರತಿಷ್ಠೆಗಾಗಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನನ್ನ ಹಾಗೂ ಸುಧಾಕರ್ ನಡುವೆ ಸಮನ್ವಯತೆ ಇಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಜತೆಗೆ ಶಾಲೆ ಆರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಹೋಗುತ್ತಿದೆ. ಶಾಲೆ ಶುರು ಮಾಡೋದು ಸರ್ಕಾರದ ಪ್ರತಿಷ್ಠೆಗಾಗಿ ಅಲ್ಲ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾನೇನೂ ಬೆಂಗಳೂರಲ್ಲಿ ಕುಳಿತಿಲ್ಲ, ಗ್ರಾಮೀಣ ಪ್ರದೇಶದ ಬಗ್ಗೆಯೂ ನೋಡ್ತಿದ್ದೇವೆ. ಅಲ್ಲಿ ಮಕ್ಕಳು ಬಾಲ್ಯ ವಿವಾಹ ಸೇರಿ ಏನೆಲ್ಲ ಪರಿಣಾಮ ಆಗಿದೆ ಅಂತ ಗೊತ್ತಿದೆ. ಅದಕ್ಕಾಗಿ ನಾವು ಶಾಲೆ ಆರಂಭದ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನು ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನಡುವೆ ಹೊಂದಾಣಿಕೆ ಇದೆ. ನಾವು ವೈಯಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿಲ್ಲ, ರಾಜ್ಯದ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದ್ದೇವೆ. ಪ್ರತಿಯೊಂದು ಹಂತದಲ್ಲೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಮತ್ತೆ ಶಿಕ್ಷಣ ಹೇಗೆ ಸಮಾಜಕ್ಕೆ ಅತ್ಯವಶ್ಯವೆಂಬುದನ್ನು ಅರಿತು ನಾವು ಕೂಡ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ನಾವಿಬ್ಬರೂ ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನನ್ನ ಮತ್ತು ಸಚಿವ ಸುಧಾಕರ್ ಸ್ನೇಹ ತುಂಬಾ ಚೆನ್ನಾಗಿದೆ. ನಾವು ಸರ್ಕಾರದಲ್ಲಿ ವೈಯಕ್ತಿಕ ಪ್ರತಿಷ್ಠೆಗೆ ಕೆಲಸ ಮಾಡುತ್ತಿಲ್ಲ. ನಮ್ಮ ನಡುವೆ ಅತ್ಯುತ್ತಮ ರೀತಿಯ ಸಮನ್ವಯತೆಯಿದೆ ಎಂದು ಹೇಳಿದರು.
ಶಾಲೆಗಳಿಲ್ಲದೇ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ, ಬಾಲ್ಯವಿವಾಹ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಹೊರತು ಶಾಲಾ ಆರಂಭಕ್ಕೆ ನಾನು ಹಠ ಹಿಡಿದಿಲ್ಲ. ಅದರಿಂದ ನನಗೆ ಆಗಬೇಕಿರುವುದು ಏನೂ ಇಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಕೊರೊನಾ ಇಲ್ಲದ ಜಿಲ್ಲೆಗಳಲ್ಲಿ ಶಾಲೆಗಳ ಆರಂಭಕ್ಕೆ ಹೈಕೋರ್ಟ್ ಸಲಹೆ ಕೊಟ್ಟಿದೆ ಎಂದ ಸಚಿವರು, ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದವರು. ಶಾಲೆಗಳ ಬಗ್ಗೆ ಅಭಿಪ್ರಾಯ ಕೊಡಲು ವಿಶ್ವನಾಥ್ ಅವರಿಗೆ ಪೂರ್ಣ ಅಧಿಕಾರ ಇದೆ. ವಿಶ್ವನಾಥ್ ಅವರ ಅಭಿಪ್ರಾಯಗಳಿಗೆ ನಾನು ಗೌರವ ಕೊಡುತ್ತೇನೆ ಎಂದು ತಮ್ಮ ವಿರುದ್ಧ ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿಕೆಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದರು.