ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷಗಾದಿಯನ್ನು ಎಸ್‍ಟಿ ಅಭ್ಯರ್ಥಿಗೆ ಮೀಸಲಿರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ನಗರದಲ್ಲಿ ಶಾಸಕ ಎಚ್‍ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುಮತವಿದ್ದರೂ ಜೆಡಿಎಸ್ ಪಕ್ಷ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ. ಈ ನಡುವೆ ನಗರಸಭೆ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವಾಗಿದ್ದು, ಈ ಬಗ್ಗೆ ಹಾಸನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ ಮಾಡಿದ್ದಾರೆ ಎಂದರು.
ನ್ಯಾಯಾಲಯ ಇದನ್ನು ಗಮನಿಸಿ ಸ್ವಯಂಪ್ರೇರಿತ ಕೇಸ್ ತಗೆದುಕೊಳ್ಳಬೇಕು. ಕೋರ್ಟ್‌ಗೆ ಮರೆ ಮಾಚಿರುವ ಅಡ್ವೋಕೇಟ್ ಜನರಲ್‍ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಜೆಡಿಎಸ್ ಬಹುಮತ ಇದೆ ಎಂದು ಬೇಕಂತಲೇ ಅಧಿಕಾರ ತಪ್ಪಿಸಿದ್ದಾರೆ. ಇದಕ್ಕಾಗಿ 7 ತಿಂಗಳಿಂದ ಸರ್ಕಸ್ ಮಾಡಿದ್ದಾರೆ. ಯಡಿಯೂರಪ್ಪಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದೆಯೇ? ಇದರ ವಿರುದ್ಧ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬೆಳೆಯುತ್ತದೆ ಎಂಬ ಭಯ ಇರಬಹುದು. ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್ ಮಾಡಿದ್ದನ್ನು ಈಗ ಬಿಜೆಪಿಯವರು ಮಾಡಿದ್ದಾರೆ. ಹರಿಹರ ನಗರಸಭೆಗೆ ಮೀಸಲಾಗಿದ್ದ ಎಸ್‍ಟಿ ಮೀಸಲಾತಿಯನ್ನು ಹಾಸನ ನಗರಸಭೆಗೆ ಹಾಕಿದ್ದಾರೆ. ರಾಜ್ಯದಲ್ಲಿ ಎಸ್‍ಟಿಗೆ ಮೀಸಲು ಇರುವುದು ಎರಡೇ ಸ್ಥಾನ. ಅದು ಕೊಪ್ಪಳ ಮತ್ತು ಹರಿಹರಕ್ಕೆ ಇದನ್ನು ಅಡ್ವೋಕೇಟ್ ಜನರಲ್ ಹೈಕೋರ್ಟಿಗೂ ನೀಡಿದ್ದರು. ಆದರೀಗ ರಾತ್ರೋರಾತ್ರಿ ಮೀಸಲಾತಿ ಬದಲು ಮಾಡಿದ್ದಾರೆ ಎಂದು ದೂರಿದ ಅವರು, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದರು.
Ellavu bjp mayaagide