ಹಾವೇರಿ: ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೊಗಾದ ಸಂತ್ರಸ್ತ ಮಹಿಳೆಯರಿಗೆ ಕಾನೂನಿನ ನೆರವು, ರಕ್ಷಣೆಯ ಜತೆಗೆ ಅವರ ಬದುಕಿಗೆ ಅಗತ್ಯವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಆದ್ಯತೆ ನೀಡಲು ವಿವಿಧ ಸ್ವಯಂ ಸೇವಾ ಸಂಘಟನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂತ್ವನ, ಸ್ವಾಧಾರ, ಸ್ಪಂದನ ದತ್ತು ಕೇಂದ್ರ, ಮಕ್ಕಳ ಸಹಾಯವಾಣಿ ಸೇರಿ ವಿವಿಧ ಸ್ವಯಂ ಸೇವಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣಗಳ ವಿವರ ಪಡೆದರು.
ಅತ್ಯಾಚಾರಕ್ಕೊಳಗಾದ ಮಹಿಳೆಯ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಹಾಗೂ ಸಂತ್ರಸ್ತೆಗೆ ಆತ್ಮಸ್ಥೈರ್ಯ ತುಂಬಬೇಕು, ಅತ್ಯಾಚಾರವೆಸಗಿದವರ ಸಾಕ್ಷಿಗಳು ನಾಶವಾಗದಂತೆ ನೋಡಿಕೊಳ್ಳಬೇಕು, ಹಣಕಾಸಿನ ಸಹಕಾರ ಹಾಗೂ ಅವಳಿಗೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಕುಟುಂಬದಿಂದ ದೂರಮಾಡುವ ದೂರುಗಳು ಹೆಚ್ಚಾಗಿ ಬರುತ್ತಿವೆ. ಇದರೊಂದಿಗೆ ಅಪ್ರಾಪ್ತರ ಪ್ರೇಮ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇಂತಹ ಪ್ರಕರಣಗಳ ಬಗೆಗೆ ಹೆಚ್ಚಿನ ಆಸಕ್ತಿ ವಹಿಸಿ ತಡೆಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಬದಲಾವಣೆ ತರುವಲ್ಲಿ ಶ್ರಮಿಸಬೇಕು ಎಂದರು.
ತಾಲೂಕುವಾರು ಮಹಿಳಾ ದೌರ್ಜನ್ಯ ಪ್ರಕರಣಗಳ ಮಾಹಿತಿ ಪಡೆದ ಅವರು ಅವುಗಳ ನಿಭಾವಣೆ, ಕೌನ್ಸಲಿಂಗ್ ಪದ್ಧತಿ, ಪರಿಹಾರ ಕ್ರಮಗಳ ಕುರಿತಂತೆ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಿಂದ ಮಾಹಿತಿ ಪಡೆದರು.
ಗ್ರಾಮೀಣ ಭಾಗದಲ್ಲಿ ಕಲಿಕಾ ಹಂತದಲ್ಲಿನ ವಿದ್ಯಾರ್ಥಿಗಳು ಕಾನೂನಿನ ಅರಿವಿಲ್ಲದೇ ತಪ್ಪುಗಳನ್ನು ಮಾಡಿಕೊಳ್ಳುತ್ತಾರೆ. ತಪ್ಪಿನ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬೀದಿ ನಾಟಕ, ಸಂಗೀತ, ಕೀರುಚಿತ್ರಗಳ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಪಂದನ ದತ್ತು ಕೇಂದ್ರದ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿ ಅಲ್ಲಿಯ ವಾತಾವರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಶೀಘ್ರವೇ ಉತ್ತಮ ಪರಿಸರ ಇರುವ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದರು.
ಪರಿಹಾರಕ್ಕೆ ಮನವಿ: ಸಭೆಯಲ್ಲಿ ಆಯೋಗದ ಅಧ್ಯಕ್ಷರಿಗೆ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತ ಯುವತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಸಂತ್ರಸ್ತರು ಸಮಸ್ಯೆಗಳ ಪರಿಹಾರ ಕೋರಿ ಮನವಿ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ.ಶೆಟ್ಟಪ್ಪನವರ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಎಸ್.ಎಚ್.ಮಜೀದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮೇಲ್ವಿಚಾರಕರು ಭಾಗವಹಿಸಿದ್ದರು.