“ಬೃಹತ್ ಕೋವಿಡ್ ಲಸಿಕಾ ಮೇಳ”: ಬಿಬಿಎಂಪಿ ವ್ಯಾಪ್ತಿ 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ – ಗೌರವ್ ಗುಪ್ತ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 17 ರಂದು “ಬೃಹತ್ ಕೋವಿಡ್ ಲಸಿಕಾ ಮೇಳ”ವನ್ನು ಹಮ್ಮಿಕೊಳ್ಳಲಾಗಿದ್ದು, ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದ ಕೊಳಗೇರಿ ಪ್ರದೇಶಗಳು, ಲಸಿಕೆ ಪಡೆಯದ ಪ್ರದೇಶಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸಿಬ್ಬಂದಿ ಸೇರಿದಂತೆ ಇನ್ನಿತರ ಸ್ಥಳಗಲ್ಲಿ ವಿಶೇಷ ಕ್ಯಾಂಪ್ ಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಲಾಗುವುದು.
ಅದಕ್ಕಾಗಿ ಈಗಾಗಲೇ ಪಾಲಿಕೆಯ ಎಲ್ಲ ವಲಯಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಬರುವ ವಾರ್ಡ್ ಗಳಲ್ಲಿ ಎಲ್ಲೆಲ್ಲಿ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ಮೈಕ್ರೊ ಪ್ಲಾನ್ ಸಿದ್ದಪಡಿಸಿಕೊಳ್ಳಲಾಗಿದೆ.
ಬೃಹತ್ ಲಸಿಕಾ ಮೇಳದ ಪ್ರಮುಖ ಅಂಶಗಳು: • ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 760 ಕೊಳಗೇರಿ ಪ್ರದೇಶಗಳಲ್ಲಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
• ಕೋವಿಡ್ ಲಸಿಕೆ ನೀಡಲು 2178 ಸೆಷನ್ ಸೈಟ್ ಗಳ ವ್ಯವಸ್ಥೆ ಮಾಡಲಾಗಿದೆ.
• ಪ್ರತಿ ವಾರ್ಡ್ ನಲ್ಲೂ ಕನಿಷ್ಠ 10 ರಿಂದ 12 ಸೆಷನ್ ಗಳ ವ್ಯವಸ್ಥೆ ಮಾಡಿಕೊಂಡು, ಅದರಲ್ಲಿ 1 ಅಥವಾ 2 ಸ್ಥಿರ ಸೈಟ್‌ಗಳು ಉಳಿದ ಸ್ಥಳಗಳಲ್ಲಿ ಲಸಿಕೆ ನೀಡುವುದು.
• ಪ್ರತಿ ಸೆಷನ್ ಸೈಟ್‌ನಲ್ಲಿ ಕನಿಷ್ಠ 225 ಡೋಸ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ.
• ಬಿಎಲ್‌ಎಸ್ ಆಂಬ್ಯುಲೆನ್ಸ್‌ನಿಂದ ದೂರದ ಸ್ಥಳಗಳು ಅಥವಾ ಹಿರಿಯ ನಾಗರಿಕರು/ಭಿನ್ನ ಸಾಮರ್ಥ್ಯ ಹೊಂದಿರುವವರ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು.
• ಪಾಲಿಕೆ ವ್ಯಾಪ್ತಿಯಲ್ಲಿ ನಿಖರ ಗುರಿಯನ್ನು ತಲುಪುವ ಸಲುವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಹಾಗೂ ಔಟ್ ರೀಚ್ ಸೆಷನಗಳಲ್ಲಿ ಬೆಳಗ್ಗೆ 8.00 ರಿಂದ ಸಂಜೆ 5.00 ಗಂಟೆಯವರೆಗೆ ಲಸಿಕೆ ನೀಡಲಾಗುವುದು.
• ಪಾಲಿಕೆ ಹಾಗೂ ಇತರೆ ಲಸಿಕಾ ತಂಡಗಳನ್ನು ಬಳಸಿಕೊಂಡು ಹೆಚ್ಚು ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.
• ಅಜೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ಇತರ ಎನ್‌ಜಿಒ ಪಾಲುದಾರರು ನೀಡುವ ವ್ಯಾಕ್ಸಿನೇಟರ್ ತಂಡಗಳನ್ನು ಬಳಸಿಕೊಳ್ಳಲಾಗುವುದು.
• ಖಾಸಗಿ ಆಸ್ಪತ್ರೆಗಳು ನೀಡುವ ತಂಡಗಳನ್ನು ಬಳಸಿಕೊಳ್ಳಲಾಗುವುದು.
• ವೈದ್ಯಕೀಯ/ನರ್ಸಿಂಗ್ ಕಾಲೇಜುಗಳು ನೀಡುವ ತಂಡಗಳನ್ನು ಬಳಸಿಕೊಳ್ಳಲಾಗುವುದು.
• ಖಾಸಗಿ ಆಸ್ಪತ್ರೆಯ ಆವರಣವನ್ನು ಕೂಡ ಲಸಿಕೆಗಾಗಿ ಬಳಸಲಾಗುವುದು. ಸದರಿ ಆಸ್ಪತ್ರೆಗಳು ಲಸಿಕೆ ನೀಡಲು ಸಿಬ್ಬಂದಿಯನ್ನು ಒದಗಿಸಲಿವೆ.
• ಲಸಿಕೆ ನೀಡುವ ಸ್ಥಳದಲ್ಲಿ ಇಐಸಿ(Information, Education & Communication) ಚಟುವಟಿಕೆಗಳನ್ನು ಕಡ್ಡಾಯವಾಗಿ ಅನುಸರಿಸಲಾಗುವುದು.
• ಪಾಲಿಕೆ ಕೇಂದ್ರ ಕಛೇರಿಯಿಂದ ಲಸಿಕೆ ನೀಡುವ ಸ್ಥಳಗಗಳಿಗೆ ಇಐಸಿ(Information, Education & Communication) ಸಂಬಂಧಿಸಿದಂತೆ ಬಿತ್ತಿಪತ್ರಗಳು ಮತ್ತು ಬ್ಯಾನರ್ ಗಳ ವ್ಯವಸ್ಥೆ ಮಾಡಲಾಗುವುದು.
• ನಗರದ ಆಯಾ ವಾರ್ಡ್, ಕೊಳಚೆ ಪ್ರದೇಶಗಳಲ್ಲಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಂಡಿರುವ ಬಗ್ಗೆ ಸರ್ಕಾರಿ/ಪಾಲಿಕೆಯ ವತಿಯಿಂದ ಪೋಸ್ಟರ್ ಗಳು ಮತ್ತು ಆಟೋಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಶಿಷ್ಟಾಚಾರ ರಿತ್ಯಾ ಲಸಿಕೆ ಪಡೆಯುವ ಬಗ್ಗೆ ಜಾಗೃತಿ/ಅರಿವುದು ಮೂಡಿಸಲಾಗುವುದು.