ಬೆಂಗಳೂರು: ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ಇದೇ ತಿಂಗಳು ನಡೆದ ಉಪ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ ನಂತರ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕೊಂಡರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ಪುನಾರಚನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆದರೆ ಅವರ, ನಾಗಲೋಟಕ್ಕೆ ಕಡಿವಾಣ ಹಾಕಲು ಕೇಂದ್ರದ ಬಿಜೆಪಿ ನಾಯಕರು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಈ ಹಿಂದೆ ಸಂಪುಟ ವಿಸ್ತರಣೆ ಮಾಡಬೇಕು ಎಂದುಕೊಳ್ಳುತ್ತಿದ್ದ ಬಿಎಸ್‌ವೈ ಈಗ ಪುನಾರಚನೆಯೇ ಆಗಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈ ನಡುವೆ ಸಂಪುಟ ವಿಸ್ತರಣೆಬೇಕಾದರೆ ಮಾಡಿಕೊಳ್ಳಲಿ ಎಂಬ ಲೆಕ್ಕಚಾರದಲ್ಲಿದ್ದ ಹೈಕಮಾಂಡ್ ಈಗ ಬಿಎಸ್‌ಎವೈ ಅವರ ಈ ನಡೆಯಿಂದ ಕೊಂಚ ಪೀಕಲಾಟಕ್ಕೆ ಒಳಗಾಗಿದ್ದಾರೆ. ಇದರಿಂದ ಪಕ್ಷಕ್ಕೆ ಎಲ್ಲಿ ಹೊಡೆತ ಬೀಳುವುದೋ ಎಂದು ತಲೆ ಕೆಡಿಸಿಕೊಂಡಿದ್ದು ಪುನಾರಚನೆ ಮಾಡಬೇಕು ಎಂದಾದರೆ ನಮಗೂ ಹೆಚ್ಚಿನ ಕಾಲವಕಾಶ ಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ತನಕ ಈ ವಿಚಾರದಲ್ಲಿ ಯಾವುದೇ ಚರ್ಚೆ ಬೇಡ ಎಂಬ ಸಂದೇಶ ಸಹ ರವಾನೆಯಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಹೀಗಾಗಿ ಈ ಹಿಂದೆ ಸಂಪುಟ ಕುರಿತಾದ ಚರ್ಚೆಗೆ ಡೆಲ್ಲಿಗೆ ಹೋಗಬೇಕು ಎಂಬ ಬಿಎಸ್‌ವೈ ಪ್ಲಾನ್‌ಗೆ ಇದರಿಂದ ಸ್ವಲ್ಪ ಹಿನ್ನಡೆಯಾಗಿದೆ. ಸಿಎಂ ಅವರ ಈ ಹೊಸ ಬೇಡಿಕೆಯ ಹಿನ್ನೆಲೆಯಲ್ಲಿ ಬಿಹಾರ ರಾಜಕೀಯದ ನೆಪವೊಡ್ಡಿ ಪ್ರಕ್ರಿಯೆಯನ್ನು ಇನ್ನಷ್ಟು ಕಾಲ ಮುಂದೂಡಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸಂಪುಟ ವಿಸ್ತರಣೆ ಮಾಡಿ ಉಳಿದಿರುವ ಸ್ಥಾನಗಳಿಗೆ ಹೊಸಬರನ್ನು ತುಂಬುವ ಬದಲು ತಮಗೆ ಬೇಕಾದಂತೆ ಹೊಸದಾಗಿಯೇ ಸಂಪುಟ ರಚಿಸಿಕೊಂಡು ಪೂರ್ಣ ಪ್ರಾಬಲ್ಯ ಸ್ಥಾಪಿಸುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ. ಅದಕ್ಕೆ ಬ್ರೇಕ್ ಹಾಕಲು ಪಕ್ಷದ ವರಿಷ್ಠರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಸಹ ಬಲ್ಲ ಮೂಲಗಳು ಹೇಳುತ್ತಿವೆ.