- ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಿರಸ್ಕರಿಸಿದ್ದು ನಾನಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು ಅಲ್ಲದೆ ಖರ್ಗೆ ಅವರ ಹೆಸರನ್ನು ಯಾರು ತಿರಸ್ಕರಿಸಿದರು ಎಂದು ಎಚ್.ಡಿ. ದೇವೇಗೌಡರೇ ಹೇಳಲಿ ಎಂದು ಸವಾಲೆಸೆದಿದ್ದಾರೆ.
ಇಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಹುಟ್ಟೂರು ಸಿದ್ದರಾಮನ ಹುಂಡಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪಾಪ ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂದು ಎಲ್ಲರೂ ಹೇಳುತ್ತಲೇ ಇದ್ದಾರೆ. ಹಾಗಿದ್ದರೆ 1999ರಿಂದ 6 ವರ್ಷಗಳ ಕಾಲ ಜೆಡಿಎಸ್ ಅಧ್ಯಕ್ಷನಾಗಿದ್ದವನು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ ಎಂಬ ಪ್ರಶ್ನೆಗೆ ಜೆಡಿಎಸ್‌ನವರೇ ಉತ್ತರಿಸಬೇಕು ಎಂದು ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ ಎಂದರು.
ಇನ್ನು ಆರು ವರ್ಷಗಳು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದವರು ಯಾರು ಎಂಬ ಪ್ರಶ್ನೆಗೆ ಒಮ್ಮೆ ಉತ್ತರಿಸಿ ಎಂದು ಸವಾಲೆಸೆದ ಅವರು, ಅಂದು ನಾನು ಪಕ್ಷ ಸಂಘಟನೆ ಮಾಡದಿದ್ದರೆ ಅದು ಯಾವ ಸ್ಥಿತಿಗೆ ತಲುಪುತ್ತಿತ್ತೊ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಬಗ್ಗೆ ಹೋರಾಟ ಮಾಡುವ ಅಗತ್ಯವೇ ಇಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಶಿಫಾರಸು ಮಾಡಿದ್ದೆ. ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಇದೀಗ ಈಶ್ವರಪ್ಪ, ಎಚ್. ವಿಶ್ವನಾಥ್ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕುಲಶಾಸ್ತ್ರ ಅಧ್ಯಯನದ ವರದಿ ಪಡೆದು ಅವರೇ ಶಿಫಾರಸು ಮಾಡಿಸಲಿ ಎಂದು ಸಿದ್ದರಾಮಯ್ಯ ಅವರ ತಾಕತ್ತನ್ನು ತೋರಿಸಲಿ ಎಂದು ಕಾಲೆಳೆದರು.