ಬೆಂಗಳೂರು: ಡಿಸಿಎಂ ಮಾಡಬೇಕು ಎಂಬುದು ನನ್ನ ಹಳೇಯ ಬೇಡಿಕೆಯಾಗಿದೆ, ಸಮಾಜ ಕಲ್ಯಾಣ ಖಾತೆ ಜೊತೆಗೆ ಡಿಸಿಎಂ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗಿದೆ. ಆದರೆ ಈ ಹಿಂದಿನ ನನ್ನ ಖಾತೆ (ಆರೋಗ್ಯ) ಜತೆಗೆ ಡಿಸಿಎಂ ಹುದ್ದೇನೂ ಕೊಡಬೇಕು ಎಂದು ಸಚಿವ ಶ್ರೀರಾಮುಲು ಪಟ್ಟು ಹಿಡಿದಿದ್ದಾರೆ.
ನನಗೆ ತುಂಬಾ ಅನುಭವವಿದೆ, ಜನರ ಬೇಡಿಕೆಯನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿಯಾಗಿದೆ. ಆದರೆ ತಮಗೆ ಒಂದು ಮಾತು ತಿಳಿಸದೇ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದಕ್ಕೆ ಶ್ರೀರಾಮುಲು ಸಿಎಂ ಮುಂದೆಯೇ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಶ್ರೀರಾಮುಲು ಅವರ ಖಾತೆ ಬದಲಾವಣೆ ಮಾಡಿರುವ ಸಿಎಂ ಯಡಿಯೂರಪ್ಪ ಸಮಾಜ ಕಲ್ಯಾಣ ಖಾತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಖಾತೆ ಬದಲಾಗುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ, ಸಂಪುಟ ಪುನಾರಚನೆ ವೇಳೆ ಕೂಡ ತಾವು ಸೇಫ್ ಎಂದೇ ಭಾವಿಸಿದ್ದಾಗಿ ಶ್ರೀರಾಮುಲು ಆಪ್ತರ ಬಳಿ ತಮಗಾದ ಮಾನಸಿಕ ನೋವನ್ನು ತೋಡಿಕೊಂಡಿದ್ದಾರೆ.
2008 ರಲ್ಲಿ ನಾನು ಆರೋಗ್ಯ ಇಲಾಖೆ ನಿರ್ವಹಿಸಿದ್ದೆ, ನಾನು ಮೊದಲಿನಿಂದಲೂ ಸಮಾಜ ಕಲ್ಯಾಣ ಇಲಾಖೆ ಬಯಸಿದ್ದೆ, ಹಿಂದುಳಿದ ವರ್ಗಗಳ ಸಮುದಾಯಗಳ ಒಳಿತಿಗಾಗಿ ನಾನು ಕೆಲಸ ಮಾಡಲು ಬಯಸಿದ್ದೇನೆ ಎಂದು ಸಿಎಂ ಬಿಎಸ್‌ವೈ ಅವರಿಗೂ ತಿಳಿಸಿದ್ದಾರೆ.
ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ವಾಲ್ಮೀಕಿ ಸಮುದಾಯದ ಸಂಖ್ಯೆ ಅಧಿಕವಾಗಿದೆ, ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯದ 60 ಲಕ್ಷ ಮಂದಿ ತಮ್ಮನ್ನು ಡಿಸಿಎಂ ಮಾಡಬೇಕು ಎಂದು ಬಯಸಿದ್ದಾರೆ ಎಂದು ಈ ಹಿಂದಿನಿಂದಲೂ ಶ್ರೀರಾಮುಲು ಹೇಳುತ್ತಲೇ ಬಂದಿದ್ದಾರೆ.
ಈಗ ನನಗೆ ನೀಡಿರುವ ಖಾತೆ ಬೇಡ ನನಗೆ ಆರೋಗ್ಯ ಖಾತೆ ಜತೆಗೆ ಡಿಸಿಎಂ ಹುದ್ದೆಯೂ ಬೇಕು ಎಂದು ರಚ್ಚೆ ಹಿಡಿದಿರುವುದಾಗಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಆದರೆ ಪಕ್ಷ ಹೈ ಕಮಾಂಡ್ ಯಾವ ನಿರ್ಧಾರಕ್ಕೂ ಇನ್ನು ಬದಿಲ್ಲ ಎಂದು ಹೇಳಲಾಗುತ್ತಿದೆ.