ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಯಾರ ಪಾತ್ರ ದೊಡ್ಡದು ಎಂಬ ಬಿಸಿಬಿಸಿ ಚರ್ಚೆಗೆ ಮುಖ್ಯಮಂತ್ರಿ ಬಿಎಸ್‌ವೈ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನಾಂದಿ ಹಾಡಿದ್ದಾರೆ. ಬಿಜೆಪಿ 105 ಶಾಸಕರು ಇಲ್ಲದಿದ್ದರೆ ಸರ್ಕಾರದ ರಚನೆ ಆಗುತ್ತಿರಲಿಲ್ಲ ಎಂದು ಬಿಜೆಪಿಗೆ ವಲಸೆ ಬಂದ 17 ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಹೇಳಿಕೆ ನೀಡಿರುವ ರೇಣುಕಾಚಾರ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದು, 105 ಶಾಸಕರು ಇದ್ದಾಗ ಸರ್ಕಾರ ರಚನೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೇಣುಕಾಚಾರ್ಯ ಹೇಳಿರುವುದೇನು? ರಾಜ್ಯದಲ್ಲಿ ಬಿಜೆಪಿ ಶಾಸಕರು ಇರುವುದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜತೆಗೆ 17 ಶಾಸಕರ ಬಗ್ಗೆ ಗೌರವವಿದೆ. ಹೀಗಾಗಿ ಅವರಿಗೆ ಪಕ್ಷದಲ್ಲಿ ಒಳ್ಳೇ ಸ್ಥಾನಮಾನಗಳನ್ನು ನೀಡಲಾಗಿದೆ. ಆದರೆ, 105 ಶಾಸಕರು ಇಲ್ಲದಿದ್ದರೆ ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು ಎಂದು ನಮ್ಮಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳಿಕೊಳ್ಳುತ್ತಿರುವ ವಲಸೆ ಬಂದ ಶಾಸಕರಿಗೆ ಚಾಟಿ ಬೀಸಿದರು.
ಜತೆಗೆ ಇನ್ನು ಮುಂದೆ ಯಾರೂ ನನ್ನಿಂದಲೇ ಸರಕಾರ ಬಂದಿದೆ ಎಂದು ಹೇಳಿಕೊಳ್ಳಬಾರದು. 105 ಶಾಸಕರು ಮೊದಲು ನಂತರ ಉಳಿದವರು ಎಂದು ಎಚ್ಚರಿಕೆ ನೀಡಿದ್ದಾರೆ.
ಎಂಟಿವಿ ತಿರುಗೇಟು? ಬಿಜೆಪಿಯಲ್ಲಿ 105 ಶಾಸಕರು ಇದ್ದಾಗ ಸರಕಾರ ರಚನೆ ಮಾಡಲು ಏಕೆ ಸಾಧ್ಯವಾಗಲಿಲ್ಲ. 17 ಶಾಸಕರು ಬಂದಿದ್ದರಿಂದಲೇ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು.
ಇನ್ನು ನಾವೆಲ್ಲ ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ ಈಗ ನಾವು ಕೂಡ ಬಿಜೆಪಿಯವರೇ ಎಂದು ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.