ನ್ಯೂಡೆಲ್ಲಿ: ದೇಶದಲ್ಲಿ ದಿನೇದಿನೆ ಕೊರೊನಾ ಮಹಾಮಾರಿ ತನ್ನ ರುದ್ರನರ್ತನವನ್ನು ಮುಂದುವರಿಸಿದ್ದು ಶನಿವಾರ ಸಾರ್ವಕಾಲಿಕ ದಾಖಲೆಯ 86,432 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೊನಾ ತವರು ಚೀನಾದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ದಾಖಲಾದ (85, 102) ಪ್ರಕರಣಗಳಿಂತಲೂ ಹೆಚ್ಚು ಎನ್ನುವುದು ದೇಶದ ಜನರನ್ನು ಬೆಚ್ಚಿಬೀಳಿಸದೆ ಇರದು.
ದೇಶದಲ್ಲಿ ಒಂದೇ ದಿನ 86,432 ಜನರಲ್ಲಿ ಹೊಸದಾಗಿ ವಕ್ಕರಿಸಿರುವ ವೈರಾಣು ಸೋಂಕು ಈ ಮೂಲಕ ದೇಶದಲ್ಲಿ 40 ಲಕ್ಷ ಗಡಿ ದಾಟಿದ್ದು, ಒಟ್ಟಾರೆ 40,23,179ಕ್ಕೆ ತಲುಪಿದೆ.
ಇನ್ನು ವಿಶ್ವದಲ್ಲಿ 4,091,801 ಸೋಂಕಿತರನ್ನು ಹೊಂದಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ ರಾಷ್ಟ್ರವನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1089 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 69,635 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
40,23,179 ಲಕ್ಷ ಮಂದಿ ಸೋಂಕಿತರ ಪೈಕಿ 31,07,223 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,46,321 ರಷ್ಟು ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,59,346 ಕೋವಿಡ್-19 ಪರೀಕ್ಷೆ ನಡೆಸಲಾಗಿದೆ: ಐಸಿಎಂಆರ್
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 10,59,346 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶನಿವಾರ ಮಾಹಿತಿ ನೀಡಿದೆ.