ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ದೇಶವು ವಿಭಿನ್ನ ರೂಪಗಳನ್ನು ಹೊಂದಬಲ್ಲ ಆಗೋಚರ ಶತ್ರುಗಳನ್ನು ಎದುರಿಸುತ್ತಿದೆ. ಅದರ ವಿರುದ್ಧದ ಹೋರಾಟಕ್ಕೆ ಲಸಿಕೆಯೇ ಆಯುಧ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರೈತರ ಖಾತೆಗಳಿಗೆ ಪಿಎಂ ಕಿಸಾನ್ 8ನೇ ಕಂತಿನ ಹಣ ಬಿಡುಗಡೆ ಮಾಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ನೂರು ವರ್ಷಗಳ ಬಳಿಕ ಅಸಾಂಕ್ರಾಮಿಕ ರೋಗ ಜಗತ್ತನ್ನು ಪರೀಕ್ಷಿಸುತ್ತಿದೆ ಹಾಗೂ ಇದರಿಂದ ನಮ್ಮ ಆಪ್ತರನ್ನು ಕಳೆದುಕೊಂಡಿದ್ದೇವೆ. ನಾನು ನಿಮ್ಮ ಪ್ರಧಾನ ಸೇವಕನಾಗಿ ಇರುವುದರಿಂದ ನಿಮ್ಮಲ್ಲಿ ಅನೇಕರು ಅನುಭವಿಸಿದ ನೋವು ನನ್ನದು ಕೂಡ ಆಗಿದೆ ಎಂದು ಹೇಳಿದರು.
ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಎಲ್ಲ ಸಮುದಾಯದ ಜನರು ತಮ್ಮ ಸರದಿ ಬಂದಾಗ ಲಸಿಕೆ ಪಡೆದುಕೊಳ್ಳಬೇಕು. ಸಾಧ್ಯವಾದಷ್ಟು ಬೇಗ ನಾಗರಿಕರಿಗೆ ರಾಜ್ಯಸರ್ಕಾರಗಳ ಜೊತೆಗೂಡಿ ಲಸಿಕೆ ಪೂರೈಕೆ ನಾಡುವ ಬಗ್ಗೆ ಕಾತರಿ ಪಡಿಸುತ್ತೇವೆ ಎಂದು ತಿಳಿಸಿದರು.
ಭಾರತವು ಕಷ್ಟಕಾಲದಲ್ಲಿ ಭರವಸೆ ಕಳೆದುಕೊಳ್ಳುವ ದೇಶವಲ್ಲ ನಮ್ಮ ಶಕ್ತಿ ನಮ್ಮ ಸಮರ್ಪಣಾ ಮನೋಭಾವದೊಂದಿಗೆ ಈ ಸವಾಲನ್ನು ಎದುರಿಸುವ ಖಾತ್ರಿಯಿದೆ ನನಗಿದೆ ಎಂದು ಭರವಸೆಯ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತಿದೆ. ಈಗಾಗಲೇ ಕನಿಷ್ಠ 2.6 ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ “ಸಮರೋಪಾದಿಯಲ್ಲಿ” ಕೆಲಸ ಮಾಡುತ್ತಿದೆ. ಹೊಸ ಆಸ್ಪತ್ರೆಗಳು ಮತ್ತು ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರಗಳನ್ನು ಸ್ಥಾಪಿಸುತ್ತಿದೆ ಮತ್ತು ಔಷಧಗಳು ಮತ್ತು ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸುತ್ತಿದೆ ಎಂದರು.
ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆ ರಾಜ್ಯಗಳಿಗೆ ಸೂಚಿಸಿದ ಪ್ರಧಾನಿ, ಕೊರೊನಾದ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಈ ಸಾಂಕ್ರಾಮಿಕವು ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಪ್ರತಿಯೊಂದು ಸರ್ಕಾರವೂ ಪ್ರಯತ್ನಿಸಬೇಕು. ಗ್ರಾಮೀಣ ಜನರಲ್ಲಿ ಈ ಬಗ್ಗೆ ಜಾಗೃತಿ ಮತ್ತು ಪಂಚಾಯತ್ ಸಂಸ್ಥೆಗಳ ಸಹಕಾರವೂ ಅಷ್ಟೇ ಮುಖ್ಯ ಎಂದು ಹೇಳಿದರು.
ಶೀತ ಮತ್ತು ಜ್ವರದಂತಹ ಕೋವಿಡ್ ರೋಗ ಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ರೈತರಿಗೆ ಮನವಿ ಮಾಡಿದ ಪ್ರಧಾನಿ, ಆದಷ್ಟು ಬೇಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ಆಗಿ ಮತ್ತು ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.