ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ?ಮೋದಿ ಉತ್ತರಿಸುವರೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಖುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ ‘ಮಹಾನಾಯಕ-ಏಕಗವಾಕ್ಷಿ’ ಬಗ್ಗೆ ಮೋದಿ ಮಾತಾಡುವರೇ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಸರ್ಕಾರದಲ್ಲೇ ‘ಏಕಗವಾಕ್ಷಿ’ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತಾ ಬ್ಯಾನರ್ಜಿ ಅವರ ಬಗ್ಗೆ ಟೀಕಿಸುವುದು ಆತ್ಮವಂಚನೆ. ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಆಗ್ರಹಿಸಿದ್ದಾರೆ.