ಮುಂಬೈ: ಶಾಲೆಗೆ ಹೋಗದೆ ಹೊಸ ಆವಿಷ್ಕಾರ ಒಂದನ್ನು ಮಾಡಿ ಯಶಸ್ವಿ ಆಗುತ್ತಿದ್ದ ಪ್ರತಿಭೆ ಯಶಸ್ಸಿನ ಹಂತ ತಲುಪುವ ಮುನ್ನವೇ ಬಲಿಯಾಗಿದೆ. ಇದು ದುರಂತವೇ ಸರಿ.
ಹೌದು! 24 ವರ್ಷದ ಯುವಕ ತಾನೇ ನಿರ್ಮಿಸಿದ ಹೆಲಿಕಾಪ್ಟರ್ ಟ್ರಯಲ್ ರನ್ ನೋಡುವ ವೇಳೆ ಅದರ ಬ್ಲೇಡ್ ಗಂಟಲಿಗೆ ತಗುಲಿ ದುರಂತ ನಡೆದು ಮೃತಪಟ್ಟಿದ್ದಾನೆ.ಈ ಘಟನೆ ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಮಹಾಗಾಂವ್ ತಾಲೂಕಿನ ಪುಲ್ಸವಾಂಗಿ ಗ್ರಾಮದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ ಮೃತ ಯುವಕ. ಈತ 8ನೇ ತರಗತಿಯಲ್ಲಿದ್ದಾಗಲೇ ಶಾಲೆ ತೊರೆದು ಮೆಕ್ಯಾನಿಕ್ ಆಗಿ ಸ್ಟಿಲ್ ಪೈಪ್‍ಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದ.
ಆತನೇ ಸಿಂಗಲ್ ಸೀಟ್ ಇರುವ ಹೆಲಿಕಾಪ್ಟರ್ ಮೂಲ ಮಾದರಿಯೊಂದನ್ನು ನಿರ್ಮಿಸಿದ್ದ. ಆದರೆ ಹೆಲಿಕಾಪ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಿದ್ದ ವೇಳೆ ಬ್ಲೇಡ್ ತಗುಲಿ ಆತನ ಗಂಟಲು ಕಟ್ ಆಗಿದೆ. ಗಾಯಗೊಂಡ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಕುರಿತಂತೆ ಪೊಲೀಸರು, ಮೃತ ವ್ಯಕ್ತಿ 2 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್‌ನನ್ನು ನಿರ್ಮಿಸಿದ್ದರು. ಅಲ್ಲದೇ ಹೆಲಿಕಾಪ್ಟರ್ ಚಾಪರ್ ಸಿದ್ಧಪಡಿಸಲು ವೆಲ್ಡಿಂಗ್ ಸ್ಟೀಲ್ ಪೈಪ್ ಮತ್ತು ಮಾರುತಿ 800 ಇಂಜಿನ್ ಬಳಸಿದ್ದರು. ಜೊತೆಗೆ ಹೆಲಿಕಾಪ್ಟರ್‌ಗೆ ಮುನ್ನ ಹೆಲಿಕಾಪ್ಟರ್ ಎಂದು ಹೆಸರಿಟ್ಟಿದ್ದರು ಮತ್ತು ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಾರ್ವಜನಿಕವಾಗಿ ಹೆಲಿಕಾಪ್ಟರ್‍ನನ್ನು ಅನಾವರಣಗೊಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಇಸ್ಮಾಯಿಲ್ ಅವರ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯ ಹೆಲಿಕಾಪ್ಟರ್‌ನನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ.