ನ್ಯೂಡೆಲ್ಲಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ 2ನೇ ದಿನವಾದ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವ ಅವರು, ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಬಾಕಿ ಹಣ ಬಿಡುಗಡೆ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ.
ಜಿಎಸ್‌ಟಿ ಪರಿಹಾರ ಬಾಕಿ ಹಣ 11,400 ಕೋಟಿ ರೂಪಾಯಿ ಕೊಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ತಿಂಗಳು ಕಂತಿನ ರೂಪದಲ್ಲಿ ಅದನ್ನು ಕೊಡಲಿದ್ದಾರೆ. ಕೃಷಿ ಸಂಬಂಧ ಯೋಜನೆಗಳ ಪ್ರಸ್ತಾಪ ಮಾಡಿದ್ದೇವೆ. ನಬಾರ್ಡ್ ಅಡಿಯಲ್ಲಿ ಸಹಾಯ ಮಾಡುವ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಜತೆ ಚರ್ಚೆ ನಡೆಸಿ ಮುಂದಿನ ತಿಂಗಳಿಂದ ರಾಜ್ಯಕ್ಕೆ 1.5 ಕೋಟಿ ಡೋಸ್ ಕೊರೊನಾ ಲಸಿಕೆ ಪೂರೈಸಲು ಮನವಿ ಮಾಡಿದ್ದಾಗಿ ಸಿಎಂ ತಿಳಿಸಿದರು.
ಕೊರೊನಾ ಲಸಿಕೆ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿರುವ ಅವರು, ಪ್ರಸ್ತುತ 60ರಿಂದ 65 ಲಕ್ಷ ಡೋಸ್ ಲಸಿಕೆಯಷ್ಟಿರುವ ಪೂರೈಕೆಯನ್ನು 1.5 ಕೋಟಿ ಡೋಸ್ಗೆ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾಗಿ ತಿಳಿಸಿದ್ದಾರೆ.
ಜತೆಗೆ ಈ ತಿಂಗಳಲ್ಲಿ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ. ಕೋವಿಡ್ ಸಂಬಂಧ ಮೂಲಸೌಕರ್ಯಕ್ಕೆ 800 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇನ್ನು ಮೇಕೆದಾಟು ವಿಚಾರವಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಉಪವಾಸ ಕೂರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಏನಾದರೂ ಮಾಡಿಕೊಳ್ಳಲಿ. ಊಟನಾದರೂ ಮಾಡಲಿ, ಉಪವಾಸವನ್ನಾದರೂ ಮಾಡಲಿ, ಮೇಕೆದಾಟು ನಮ್ಮ ಹಕ್ಕು. ನಮ್ಮ ಯೋಜನೆಯನ್ನು ನಾವು ಮಾಡುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದ್ಯತೆ ಮೇರೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ರಕ್ಷಣೆ, ಪರಿಹಾರ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಸಂಪುಟ ರಚನೆ ಬಗ್ಗೆ ಮಾತನಾಡಿದ ಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ಸಭೆ ಮುಗಿದ ಬಳಿಕ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದಿದ್ದಾರೆ. ಮುಂದಿನ ಗುರುವಾರ ನೂತನ ಸಚಿವರ ಪ್ರಮಾಣವಚನ ಆಗಬಹುದು ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿದ್ದು, ಒಂದೇ ಹಂತದಲ್ಲಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಗೊಂದಲ ಹೆಚ್ಚಾದರೆ ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಆಗಲಿದೆಯಷ್ಟೇ. ಹೀಗಾಗಿ ಸೋಮುವಾರ ಅಥವಾ ಮಂಗಳವಾರ ಸಿಎಂ ಮತ್ತೆ ದೆಹಲಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.