ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಸರ್ಕಾರದ ಆದೇಶದಂತೆ ತಿಂಗಳ ಪ್ರತೀ ಮೂರನೇ ಶನಿವಾರ ಜಿಲ್ಲಾಧಿಕಾರಿ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಇತರ ಇಲಾಖೆಯ ಅಧಿಕಾರಿಗಳ ಜೊತೆಗೆ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಹಸೀಲ್ದಾರ್ ಸಿದ್ದರಾಯ ಬೋಸಗಿ ತಿಳಿಸಿದರು
ಸರ್ಕಾರದ ಬಹು ನಿರೀಕ್ಷಿತ ಕಾರ್ಯಕ್ರಮ ‘ಹಳ್ಳಿಗಳತ್ತ ಜಿಲ್ಲಾಧಿಕಾರಿಗಳ ಚಿತ್ತ’ ಕಾರ್ಯಕ್ರಮದ ಮೂಲಕ ‘ತಹಸೀಲ್ದಾರ್ ನಡೆ ಗ್ರಾಮ ವಾಸ್ತವ್ಯ’ ಕಡೇ ಎನ್ನುವಂತೆ ಇಂದು ತಾಲೂಕಿನ ನರಿಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ರಾಜವಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮತ್ತು ಕುಂದುಕೊರತೆ ಅಹವಾಲು ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ರೈತಾಪಿ ಜನರಿಂದ ಮತ್ತು ಸಾರ್ವಜನಿಕರಿಂದ ಹಲವಾರು ಅಹವಾಲು ಬಂದಿದ್ದು, ಪಹಣಿಗಳಲ್ಲಿರುವ ಲೋಪದೋಷ, ಪಹಣಿ ಕಾಲಂ ಮೂರು ಮತ್ತು ಆಕಾರ ಬಂಧಿ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಅತೀ ಶೀಘ್ರದಲ್ಲೇ ಪರಿಹರಿಸಲಾಗುವುದು. ಇನ್ನು ವಿಶೇಷವಾಗಿ ವಿಧವಾ ವೇತನ ಮತ್ತು ಅಂಗವಿಕಲರ ಹಾಗೂ ವೃದ್ಧಾಪ್ಯ ವೇತನ ಬರದೇ ಇರುವವರ ಮಾಹಿತಿಯನ್ನು ಪಡೆದುಕೊಂಡಿದ್ದು ಅವರಿಗೂ ಶೀಘ್ರದಲ್ಲೇ ಅನುಕೂಲ ಕಲಿಸಲಾಗುವುದು ಎಂದು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಸ್ಥಳದಲ್ಲೇ ಇದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇನ್ನು ಗ್ರಾಮದ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯದ ಸ್ವಚ್ಛತೆ ಕಾಪಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಆಹಾರ ಧಾನ್ಯಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೇ ತಂದರು. ಒಟ್ಟಿನಲ್ಲಿ ಹೇಳುವುದಾದರೆ ತಹಸೀಲ್ದಾರ್ ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ತಾಲೂಕು ಆಹಾರ ಇಲಾಖೆಯ ಶಿರಸ್ತೇದಾರ ಡಿ.ಬಿ.ಪಾಟೀಲ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸಂಗಣಗೌಡ ಪಾಟೀಲ, ಭೂ ಮಾಪನ ಅಧಿಕಾರಿ ಸಿದ್ದಣ್ಣ, ನರಿಬೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಂದ್ರ ಪಾಟೀಲ, ಅಧ್ಯಕ್ಷೆ ತಿಪ್ಪಮ್ಮ ಭೀಮರಾಯ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ವಿಪಕ್ಷದ ನಾಯಕ ಬಸವರಾಜ ಪಾಟೀಲ ನರಿಬೋಳ ಸೇರಿದಂತೆ ರಾಜವಾಳ ಗ್ರಾಮಸ್ಥರು ಇದ್ದರು.
ಮಲ್ಲಿಕಾರ್ಜುನ ಬಿರಾದಾರ