ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ರಾಜ್ಯದಲ್ಲಿ ಇರುವುದು ಬೋಗಿಗಳೇ ಇಲ್ಲದ ಡಬಲ್ ಇಂಜಿನ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿರುವ ಅವರು, ಡಬಲ್ ಇಂಜಿನ್ ಸರ್ಕಾರ ಪ್ರಗತಿಗೆ ಪೂರಕ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ಬೋಗಿಗಳಿಲ್ಲ ಇಂಜಿನ್ ಇಟ್ಟುಕೊಂಡು ಏನು ಮಾಡಲು ಸಾಧ್ಯ ಎಂದು ಕೆಣಕಿದ್ದಾರೆ.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ. ಅವರೇ ಹೇಳುವಂತೆ ಇದು ಡಬಲ್ ಇಂಜಿನ್ ಸರ್ಕಾರವೇ, ಆದರೆ ಇಷ್ಟಾದರೂ ಅಭಿವೃದ್ಧಿ ಮಾತ್ರ ಶೂನ್ಯ, ಯುವಕರಿಗೆ ಉದ್ಯೋಗ ಕೊಡಲು ಆಗುತ್ತಿಲ್ಲ. ಮತ್ತೊಂದೆಡೆ ಉದ್ಯೋಗದಲ್ಲಿದ್ದ ಲಕ್ಷಾಂತರ ಯುವ ಜನರು ಇಂದು ನಿರುದ್ಯೋಗಿಗಳಾಗಿದ್ದಾರೆ. ಇಂಥ ಸರ್ಕಾರ ಮನಗೆ ಬೇಕಾ? ಎಂದು ಪ್ರಶ್ನಿಸಿದರು.
ಇನ್ನು ಬರಿ ಇಂಜಿನ್ ಕಟ್ಟಿಕೊಂಡರೆ ಏನು ಬಂತು. ರೈಲು ಓಡಲು ಬೋಗಿಗಳೂ ಬೇಕಲ್ಲವೆ ಎಂದು ಮೊದಲು ಸರಿಯಾದ ಬೋಗಿಗಳನ್ನು ಜೋಡಿಸಿ ದೇಶ ಅವೃದ್ಧಿಯಾಗುತ್ತದೆ ಎಂದು ಸಲಹೆ ನIಡಿದರು.
ಈ ಮಧ್ಯೆ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣ ರಾಜ್ಯದ ಇತಿಹಾಸದಲ್ಲಿಯೇ ಯಾರೂ ಮಾಡಿರದ ಅತ್ಯಂತ ನೀರಸದಾಯಕ ಭಾಷಣ ಎಂದು ಟೀಕಿಸಿದರು.
ಉತ್ತರದತ್ತ ಜೆಡಿಎಸ್ ಕಣ್ಣು
ಬಾಗಲಕೋಟೆ, ಬಿಜಾಪುರ, ಕೊಪ್ಪಳ, ಬೆಳಗಾವಿ, ಗದಗ ಸೇರಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ತನ್ನ ಇರುವಿಕೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದು, ಜತಗೆ ರಾಜ್ಯಾದ್ಯಂತ ಪಕ್ಷದ ಪ್ರಮುಖ ನಾಯಕರು ಹಂತಹಂತವಾಗಿ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ಭಾಗದಿಂದ ಕನಿಷ್ಠವೆಂದರೂ ಹೆಚ್ಚಿನ ಸ್ಥಾನವನ್ನು ಗೆಲ್ಲುವ ಮೂಲಕ ಇಲ್ಲಿನ ಜನರ ಸೇವೆ ಮಾಡಬೇಕು. ಆ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಇಂದಿನಿಂದಲೇ ಪಕ್ಷ ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೇವಲ ಎಚ್‌ಡಿಕೆ ಮಾತ್ರವಲ್ಲ ಮಾಜಿ ಪ್ರಧಾನಿ ದೇವೇಗೌಡ ಅವರು ಸಹ ಸಾಥ್ ನೀಡುವರು ಎಂದು ಉತ್ತರದ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.
ಇನ್ನು ಜೆಡಿಎಸ್ ಹೊಸ ಹುರೂಪಿನಲ್ಲಿ ಜನರ ಮುಂದೆ ಬರಲು ಎಲ್ಲರೀತಿಯ ಸಿದ್ಧತೆಯನ್ನು ನಡೆಸುತ್ತಿದೆ. ತನ್ನ ವ್ಯಾಪ್ತಿ ಪ್ರದೇಶವನ್ನು ಸಹ ಹೆಚ್ಚಿಕೊಳ್ಳಲು ಸಿದ್ಧವಾಗುತ್ತಿದೆ. ಇದರ ವೇಗ ನೋಡಿ ರಾಷ್ಟ್ರೀಯ ಪಕ್ಷಗಳ ನಾಯಕರ ಎದೆಯಲ್ಲಿ ಡವಡವ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳ ಹಲವು ಮುಖಂಡರು ಜೆಡಿಎಸ್ ಸೇರುವ ಮುನ್ಸೂಚನೆಯೂ ಇದೆ ಎಂದು ಉತ್ತರ ಕರ್ನಾಟಕದಲ್ಲಿ ಭಾರಿ ಚರ್ಚೆಯಾಗುತ್ತಿದೆ.