ಲೇಹ್: ಭಾರತ ಮತ್ತು ಚೀನಾ ಗಡಿ ಹಂಚಿಕೊಂಡಿರುವ ಪೂರ್ವ ಲಡಾಕ್‍ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಭಾರತೀಯ ಭೂ ಸೇನಾಪಡೆ ಮುಖ್ಯಸ್ಥ ಎಂ.ಎಂ.ನರವಾಣೆ ಶುಕ್ರವಾರ ತಿಳಿಸಿದ್ದಾರೆ.
ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನು ಆಡಿ, ಚೀನಾ ಎರಡು ಬಾರಿ ಭಾರತದ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿತು. ಇದರಿಂದ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ನಾನು ನಿನ್ನೆಯಷ್ಟೇ ಲಡಾಖ್‌ಗೆ ಭೇಟಿ ನೀಡಿ ಗಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದೇನೆ. ಜತೆಗೆ ಅಲ್ಲಿನ ಹಲವು ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಜೆಸಿಒಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಗಡಿ ಬಗ್ಗೆ ಯಾವುದೇ ರೀತಿಯ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಇನ್ನು ಯೋಧರ ನೈತಿಕ ಸ್ಥೈರ್ಯ ಹೆಚ್ಚಾಗಿದೆ. ನಮ್ಮ ಯೋಧರು ಅತ್ಯುತ್ತಮರು. ಹೀಗಾಗಿ ಸುರಕ್ಷತೆ ಹಾಗೂ ಭದ್ರತೆಗಾಗಿ ನಾವು ಕೆಲವು ಮುನ್ನೆಚ್ಚರಿಕೆ ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಆಗಸ್ಟ್ 29-30ರ ಮಧ್ಯ ರಾತ್ರಿ, ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೋಂಗ್ ಬಳಿ ಭಾರತೀಯ ಪ್ರದೇಶವನ್ನು ಅತಿಕ್ರಮಣ ಮಾಡಲು ಚೀನಾದ ಸೇನೆ ಪ್ರಯತ್ನ ನಡೆಸಿತ್ತು. ಈ ಪ್ರಯತ್ನವನ್ನು ಭಾರತೀಯ ಸೇನಾ ಪಡೆ ವಿಫಲಗೊಳ್ಳುವಂತೆ ಮಾಡಿತ್ತು.
ಚೀನಾ ಸೈನ್ಯ ಅತಿಕ್ರಮ ಮಾಡುವ ಪ್ರಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ ನಂತರ ಭಾರತೀಯ ಸೇನೆ ಮತ್ತು ಚೀನಾ ಸೇನೆ ನಡುವೆ ಬ್ರಿಗೇಡಿಯರ್ ಮಟ್ಟದ ಮಾತುಕತೆ ನಡೆಯುತ್ತಿದೆ. ಆದರೂ ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.